ನವದೆಹಲಿ: ಭದ್ರತಾ ಪಡೆ ಮತ್ತು ಸರ್ಕಾರಿ ಸಂಸ್ಥೆಗಳ ವಿರುದ್ಧ ದೊಡ್ಡಮಟ್ಟದ ವಿಧ್ವಂಸಕ ಕೃತ್ಯಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ನಕ್ಸಲರು ಹೊಂದಿದ್ದಾರೆ ಎಂದು ಗಡಿ ಭದ್ರತಾ ಪಡೆಯ ಮಾಜಿ ಮಾಹಾನಿರ್ದೇಶಕ ಪ್ರಕಾಶ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಬುಧವಾರ ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಐಇಡಿ ದಾಳಿ ಬಗ್ಗೆ ಪ್ರಕಾಶ್ ಸಿಂಗ್ ಮಾತನಾಡಿದ್ದಾರೆ.
"ನಕ್ಸಲ್ ಸಮಸ್ಯೆ ದೇಶದಲ್ಲಿ ಇನ್ನೂ ದೂರವಾಗಿಲ್ಲ, ಈ ಬಗ್ಗೆ ಸರ್ಕಾರವು ಪರಿಸ್ಥಿತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ನಕ್ಸಲರು ಒಡೆದಿರುವ ಶಕ್ತಿಯಲ್ಲ, ಅವರು ಇನ್ನೂ ದುಷ್ಕೃತ್ಯಗಳನ್ನು ಎಸಗುವ ಶಕ್ತಿಯನ್ನು ಹೊಂದಿದ್ದಾರೆ" ಎಂದು ಸಿಂಗ್ ಹೇಳಿದರು.
ದೇಶದಲ್ಲಿ ನಕ್ಸಲ್ ಸಮಸ್ಯೆ ಅಂತ್ಯಗೊಂಡಿದ್ದು, ನಕ್ಸಲ್ ಪ್ರದೇಶಗಳಲ್ಲಿ ಭಾರತೀಯ ಭದ್ರತಾ ಪಡೆಗಳು ಪ್ರಾಬಲ್ಯ ಸಾಧಿಸುತ್ತಿವೆ ಎಂಬ ಕೇಂದ್ರ ಗೃಹ ಸಚಿವಾಲಯ ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, "ಹೌದು, ನಾವು ಪ್ರಾಬಲ್ಯ ಹೊಂದಿದ್ದೇವೆ. ಆದರೆ, ನಕ್ಸಲರು ಇನ್ನೂ ದೊಡ್ಡ ಮಟ್ಟದ ಹಾಗೂ ಮಾರಣಾಂತಿಕ ದಾಳಿ ನಡೆಸಲು ಸಮರ್ಥರಾಗಿದ್ದಾರೆ ಎಂದರು. 2024ರ ವೇಳೆಗೆ ನಕ್ಸಲ್ ಮುಕ್ತ ಭಾರತ ಗೊಳಿಸುವುದಾಗಿ ಸರ್ಕಾರದ ಹೇಳಿಕೆಗೆ ಪ್ರತಿಕ್ರಿಯಿಸಿ, ಅಂತಹ ಹೇಳಿಕೆಯ ಬಗ್ಗೆ ಒಮ್ಮೆ ಆತ್ಮಾವಲೋಕನದ ಅಗತ್ಯವಿದೆ ಎಂದು ಸಿಂಗ್ ಸಲಹೆ ನೀಡಿದರು.
ಇನ್ನು ದಾಳಿಯ ನಂತರ ಗೃಹ ಸಚಿವ ಅಮಿತ್ ಶಾ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಭಾಗೇಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಕೇಂದ್ರದಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ಒದಗಿಸುವುದಾಗಿ ಭರವಸೆಯನ್ನೂ ನೀಡಿದ್ದಾರೆ. ಆದಾಗ್ಯೂ, ಛತ್ತೀಸ್‌ಗಢಕ್ಕೆ ಹೆಚ್ಚಿನ ಕೇಂದ್ರೀಯ ಪಡೆಗಳನ್ನು ಕಳುಹಿಸುವ ಅಗತ್ಯವಿಲ್ಲ ಎಂದು ಸಿಂಗ್ ಹೇಳಿದರು.
ಛತ್ತೀಸ್‌ಗಢಕ್ಕೆ ಯಾವುದೇ ಭದ್ರತಾ ಪಡೆಗಳನ್ನು ಕಳುಹಿಸುವ ಅಗತ್ಯವಿಲ್ಲ. ಏಕೆಂದರೆ ಈಗಾಗಲೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಮುಖ್ಯವಾಗಿ ಇಂತಹ ನಕ್ಸಲ್ ಪ್ರದೇಶಗಳಲ್ಲಿ ರಾಜ್ಯ ಪೊಲೀಸರು ತಮ್ಮ ಪಡೆಗಳನ್ನು ಬಲಪಡಿಸಿ ನಕ್ಸಲರ ವಿರುದ್ದ ಸಿಡಿದೆದ್ದು ಹೆಡೆಮುರಿ ಕಟ್ಟವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಸಿಂಗ್ ತಿಳಿಸಿದರು.
ಬಹುತೇಕ ಎಲ್ಲಾ ನಕ್ಸಲ್ ಪೀಡಿತ ರಾಜ್ಯಗಳ ಸ್ಥಳೀಯ ಪೊಲೀಸರು, ಈ ಸಮಸ್ಯೆಯನ್ನು ಕೇಂದ್ರ ಭದ್ರತಾ ಪಡೆಗಳು ನಿಭಾಯಿಸುತ್ತಾರೆ ಎಂದು ಭಾವಿಸುತ್ತಾರೆ. ಆದರೇ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಸ್ಥಳೀಯ ಪೊಲೀಸರು ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ. ಅಲ್ಲದೇ ಕೇಂದ್ರ ಭದ್ರತಾ ಪಡೆಗಳು ಕೂಡ ಅವರೊಂದಿಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳತ್ತವೆ ಎಂದು ಪ್ರಕಾಶ್ ಸಿಂಗ್ ಹೇಳಿದರು.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: 10 ಮಂದಿ ಪೊಲೀಸರು ಹುತಾತ್ಮ
ಘಟನೆ ಹಿನ್ನೆಲೆ: ಬುಧವಾರದಂದು ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಮಿನಿ ಗೂಡ್ಸ್ ವಾಹನದ ಮೇಲೆ ನಕ್ಸಲರು ನಡೆಸಿದ ಐಇಡಿ ದಾಳಿಯಲ್ಲಿ ಹತ್ತು ಜನ ಪೊಲೀಸರು ಮತ್ತು ಓರ್ವ ನಾಗರಿಕ ಸಾವನ್ನಪ್ಪಿದ್ದರು.
ಇದನ್ಣು ಓದಿ: ಪೂಂಚ್‌ನಲ್ಲಿ ಸೇನಾ ವಾಹನದ ಗ್ರೆನೇಡ್ ಎಸೆದ ಉಗ್ರರು: ಐವರು ಸೈನಿಕರು ಹುತಾತ್ಮ