ಬಿಹಾರ: ಕೇಂದ್ರ ಸರ್ಕಾರ ಮಂಗಳವಾರ ಹೊಸ ಸಂಸತ್ ಭವನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿತು. ಈ ಕುರಿತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ನೀಡಿರುವ 33ರಷ್ಟು ಮೀಸಲಾತಿಯಲ್ಲಿ ಶೇ 50 ಅನ್ನು ಎಸ್‌ಸಿ-ಎಸ್ಟಿ ಮತ್ತು ಒಬಿಸಿ ಸಮುದಾಯದ ಮಹಿಳೆಯರಿಗೆ ಮೀಸಲಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪತ್ರದಲ್ಲಿ, ಮೀಸಲಾತಿ ಮಸೂದೆಯನ್ನು ಮಂಡಿಸಿರುವುದು ದೇಶದ ನಾರಿಯರಿಗೆ ಸಂತೋಷದ ವಿಷಯವೇ. ಇದಕ್ಕೂ ಮೊದಲು ವಿಶೇಷ ಮೀಸಲಾತಿಯನ್ನು 1996ರಲ್ಲಿ ಅಂದಿನ ಪ್ರಧಾನಿ ದೇವೇಗೌಡರು ಮಂಡಿಸಿದಾಗ ನಾನು ಸಂಸತ್ ಸದಸ್ಯಳಾಗಿದ್ದೆ. ಆಗ ಮಂಡನೆಯಾದ ಮಸೂದೆಗೆ ತಿದ್ದುಪಡಿಯಾಗಿದೆ. ಆ ವೇಳೆ ಸದನದಲ್ಲಿದ್ದ ಅರ್ಧಕ್ಕಿಂತ ಹೆಚ್ಚಿನ ಸಂಸದರು ನನಗೆ ಬೆಂಬಲ ಸೂಚಿಸಿದ್ದರು. ಅಲ್ಲದೇ ತಿದ್ದುಪಡಿಗೆ ದೇವೇಗೌಡರು ಒಪ್ಪಿಕೊಂಡು ಮಸೂದೆಯನ್ನು ಸ್ಥಾಯಿ ಸಮಿತಿಗೆ ಒಪ್ಪಿಸುವುದಾಗಿ ತಿಳಿಸಿದ್ದರು.
ನಾನು ತಿದ್ದುಪಡಿಯ ಪ್ರಸ್ತಾಪವನ್ನು ನಿಮ್ಮ ಮುಂದೆ (ಪ್ರಧಾನಿ ಮೋದಿ) ಮಂಡಿಸುತ್ತಿದ್ದೇನೆ. ಪ್ರಸ್ತಾವಿತ ತಿದ್ದುಪಡಿಗಳೊಂದಿಗೆ ಮಸೂದೆಯನ್ನು ನೀವು ಅಂಗೀಕರಿಸುತ್ತೀರಿ ಎಂಬ ವಿಶ್ವಾಸ ನನಗಿದೆ. ಮಹಿಳೆಯರಿಗೆ 33% ಮೀಸಲಾತಿ ವಿಶೇಷ ನಿಬಂಧನೆಯಾಗಿದೆ. ಶೇ.33ರಷ್ಟು ಮೀಸಲಾತಿ ಸೀಟುಗಳಲ್ಲಿ 50 ಪ್ರತಿಶತ ಎಸ್‌ಟಿ, ಎಸ್‌ಸಿ ಮತ್ತು ಒಬಿಸಿ ಮಹಿಳೆಯರಿಗೆ ಮೀಸಲಿಡಬೇಕು. ಮುಸ್ಲಿಂ ಸಮುದಾಯದ ಹಿಂದುಳಿದ ಮಹಿಳೆಯರನ್ನೂ ಕೂಡ ಮೀಸಲಾತಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಉಲ್ಲೇಖಿಸಿದ್ದಾರೆ.
ಮಂಗಳವಾರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು. ಕಳೆದ 27 ವರ್ಷಗಳಿಂದ ಮಹಿಳಾ ಮೀಸಲಾತಿ ಮಸೂದೆ ನನೆಗುದಿಗೆ ಬಿದ್ದಿತ್ತು. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವಿಶೇಷ ಮಸೂದೆಯನ್ನು ಮಂಡಿಸಿದೆ.
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ 1992ರಿಂದ ಪ್ರಯತ್ನ ನಡೆಯುತ್ತಿದೆ. ಆದರೆ ಅಂಗೀಕಾರಕ್ಕೆ ಸಂವಿಧಾನ ತಿದ್ದುಪಡಿ ಮತ್ತು ರಾಜಕೀಯ ಒಮ್ಮತದ ಕೊರತೆ ಹಿಂದಿನ ಸರ್ಕಾರಗಳಿಗೆ ಎದುರಾಗಿತ್ತು. ಇದಕ್ಕೂ ಮೊದಲು ಮಸೂದೆಯನ್ನು ಮಾರ್ಚ್ 2010ರಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ ಲೋಕಸಭೆಯಲ್ಲಿ ಇದಕ್ಕೆ ಅಂಗೀಕಾರ ಸಿಗದ ಕಾರಣ ಕಳೆದ 13 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು.
ಇದನ್ನೂ ಓದಿ: Women's reservation bill : ಮಹಿಳಾ ಮೀಸಲಾತಿ ಮಸೂದೆ ಸಾಗಿ ಬಂದ ಹಾದಿ