ಮುಂಬೈ: ಎರಡು ಸಾವಿರದ ನೋಟು ಚಲಾವಣೆ ಮತ್ತು ಅದರ ಹಿಂಪಡೆಯುವಿಕೆ ಭಾರತೀಯ ಕರೆನ್ಸಿಯ ಸಮಗ್ರತೆ ಮತ್ತು ಸ್ಥಿರತೆಯ ಮೇಲೆ ಅನುಮಾನ ಮೂಡಿಸಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಸೋಮವಾರ ಹೇಳಿದ್ದಾರೆ. ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರದ ಮಾಜಿ ಹಣಕಾಸು ಸಚಿವರು, ಆರ್ಥಿಕ ಸೂಚ್ಯಂಕಗಳು ಕೆಳಮುಖವಾಗುತ್ತಿವೆ. ಇದು ಆರ್ಥಿಕತೆ ಬೆಳವಣಿಗೆ ಹೊಂದುತ್ತದೆ ಎಂಬ ವಿಶ್ವಾಸ ಕಡಿಮೆ ಮಾಡಿದೆ ಎಂದು ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್ ಚಲಾವಣೆಯಲ್ಲಿದ್ದ 2000 ರೂಪಾಯಿ ನೋಟುಗಳನ್ನು ಇತ್ತೀಚೆಗೆ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಅದನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಜನರಿಗೆ ಸೆಪ್ಟೆಂಬರ್ 30 ರವರೆಗೆ ಗಡುವು ನೀಡಿದೆ. ಇದೊಂದು ಬುದ್ಧಿಹೀನ ಮತ್ತು ಮೂರ್ಖ ನಡೆಯಾಗಿದೆ. 2 ಸಾವಿರ ಮೌಲ್ಯದ ನೋಟಿನ ಪರಿಚಯ ಮತ್ತು ಹಿಂತೆಗೆತ ಭಾರತದ ಕರೆನ್ಸಿಯ ಸಮಗ್ರತೆಗೇ ಪೆಟ್ಟು ನೀಡಲಿದೆ ಎಂದು ಅಭಿಪ್ರಾಯಪಟ್ಟರು.
2022 -23ರ ಮೊದಲ ಮೂರು ತ್ರೈಮಾಸಿಕಗಳು 13.2, 6.3 ಮತ್ತು 4.4 ರಷ್ಟು ಬೆಳವಣಿಗೆ ದರಗಳನ್ನು ದಾಖಲಿಸಿವೆ. ಇದು ಕುಸಿತದ ಹಾದಿಯಲ್ಲಿವೆ. 2004 ರಿಂದ 2009 ರ ನಡುವೆ ಆರ್ಥಿಕತೆ ವೇಗ ಪಡೆದುಕೊಂಡಿತ್ತು. ಅದರ ದರಕ್ಕಿಂತ ಈಗಿನ ಬೆಳವಣಿಗೆ ಕನಿಷ್ಠವಾಗಿದೆ ಎಂದು ಮಾಜಿ ವಿತ್ತ ಸಚಿವರು ಹೇಳಿದರು.
ನಿರುದ್ಯೋಗ, ಹಣದುಬ್ಬರ, ವ್ಯಾಪಕವಾದ ಅಸಮಾನತೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳ ವಿಫಲತೆಯಿಂದಾಗಿ ದೇಶದ ಆರ್ಥಿಕತೆಯು ಹೆಚ್ಚು ವೇಗ ಪಡೆಯದೇ ಸಾಧಾರಣವಾಗಿದೆ. ಈ ಎಲ್ಲದರ ಬಗ್ಗೆ ಪ್ರತಿಪಕ್ಷಗಳು ಗಂಭೀರವಾದ ಪ್ರಶ್ನೆಗಳನ್ನು ಎತ್ತಬೇಕಾಗುತ್ತದೆ. ದೇಶದ ನಿರುದ್ಯೋಗ ದರವು ಪ್ರಸ್ತುತ ಶೇಕಡಾ 7.45 ರಷ್ಟಿದೆ. ಕಾರ್ಮಿಕ ಬಲವು ಶೇಕಡಾ 48 ರಷ್ಟಿದೆ. ದರ ಏರಿಕೆ ವಿಪರೀತವಾಗಿದೆ. ಜನರು ಇದಕ್ಕೆ ತುತ್ತಾಗಿದ್ದಾರೆ ಎಂದು ಹೇಳಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಬೆದರಿಕೆ ಮತ್ತು ಸುಳ್ಳು ಪ್ರಕರಣಗಳ ಮೂಲಕ ನಾಗರಿಕರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗಿದೆ. ಅತಿಯಾದ ರಾಷ್ಟ್ರೀಯತೆ, ಧಾರ್ಮಿಕ ಅಸಹಿಷ್ಣುತೆ, ವಿಧ್ವಂಸಕತೆ, ದ್ವೇಷ ಭಾಷಣಗಳು ಮತ್ತು ನ್ಯಾಯಾಂಗೇತರ ಕ್ರಮಗಳಾದ "ಬುಲ್ಡೋಜರ್ ನ್ಯಾಯವು' ನೈಸರ್ಗಿಕ ನ್ಯಾಯ ವ್ಯವಸ್ಥೆಯನ್ನೇ ಬದಲಿಸಿದೆ ಎಂದು ಗಂಭೀರ ಆರೋಪ ಮಾಡಿದರು. ವರ್ಷದಿಂದ ವರ್ಷಕ್ಕೆ ದೇಶದ ಪರಿಸ್ಥಿತಿ ಹದಗೆಟ್ಟಿರುವಾಗ ಸರ್ಕಾರ ಮೌನ ವಹಿಸಿರುವುದು ನೋವು ಮತ್ತು ಆಘಾತದ ಸಂಗತಿಯಾಗಿದೆ ಎಂದರು.
ಕರ್ನಾಟಕದ ಫಲಿತಾಂಶ ಪ್ರಸ್ತಾಪ: ದೇಶದಲ್ಲಿ ಬಿಜೆಪಿ ಶಕ್ತಿಹೀನವಾಗಿದೆ ಎಂಬುದನ್ನು ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಉದಾಹರಣೆಯಾಗಿ ನೀಡಿದ ಚಿದಂಬರಂ ಅವರು, ಕೇಸರಿ ಪಡೆ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಲೆಕ್ಕಾಚಾರದಲ್ಲಿ ಎಡವಿದೆ ಎಂಬುದನ್ನು ಇದು ತೋರಿಸುತ್ತದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿ ಜನರು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತಂದಿದ್ದಾರೆ ಎಂದರು.
ದೇಶದಲ್ಲಿ ಇತ್ತೀಚಿಗೆ ಜನಾಂಗೀಯ ಘರ್ಷಣೆಗಳು ಹೆಚ್ಚಾಗಿವೆ. 75 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಮಣಿಪುರದ ಪರಿಸ್ಥಿತಿಯು ಆತಂಕಕಾರಿಯಾಗಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಮೌನ ವಹಿಸಿರುವುದು ಪ್ರಶ್ನಾರ್ಹವಾಗಿದೆ. ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆಡಳಿತ ಮತ್ತು ಅದರ ನೀತಿಗಳು ಎಲ್ಲಾ ವರ್ಗದವರ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಆದರೆ, 9 ವರ್ಷಗಳ ಎನ್‌ಡಿಎ ಸರ್ಕಾರ ಇದರಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಓದಿ: ಲೈಂಗಿಕ ದೌರ್ಜನ್ಯ, ಕೊಲೆ ಅಪರಾಧಿಗೆ 15 ದಿನಗಳಲ್ಲೇ ಮರಣದಂಡನೆ ವಿಧಿಸಿದ ಮಥುರಾ ಕೋರ್ಟ್...!