ಕಣ್ಣೂರು (ಕೇರಳ) : ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರ ರಾಜ್ಯ ಸಚಿವ ಸಂಪುಟ ಸಭೆಯನ್ನು ಕಣ್ಣೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಸುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ತಲಶ್ಶೇರಿಯ ಪರ್ಲ್ ವ್ಯೂ ಹೋಟೆಲ್‌ನಲ್ಲಿ ಬೆಳಗ್ಗೆ 9 ಗಂಟೆಗೆ ಸಭೆ ನಡೆಯಿತು. ಕಣ್ಣೂರು ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಇದೇ ಮೊದಲು. ಇದಕ್ಕೂ ಮುನ್ನ ತನೂರಿನ ದೋಣಿ ಅಪಘಾತದ ಹಿನ್ನೆಲೆಯಲ್ಲಿ ತಿರುವನಂತಪುರಂನ ಹೊರಭಾಗದಲ್ಲಿ ಇಂತಹ ಸಭೆ ನಡೆಸಲಾಗಿತ್ತು. ತಾನೂರಿನಲ್ಲಿರುವ ಸಚಿವ ವಿ ಅಬ್ದುಲ್ ರೆಹಮಾನ್ ಅವರ ಅಧಿಕೃತ ನಿವಾಸದಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು.
ಎಲ್‌ಡಿಎಫ್ ನಾಯಕತ್ವವು ಒಂದೂವರೆ ತಿಂಗಳ ಅವಧಿಯ ನವ ಕೇರಳ ಸದಸ್ ಔಟ್ರೀಚ್ ಕಾರ್ಯಕ್ರಮದ ಭಾಗವಾಗಿ ತಿರುವನಂತಪುರಂನ ಹೊರಗೆ ಕ್ಯಾಬಿನೆಟ್ ಸಭೆಗಳನ್ನು ನಡೆಸಲು ನಿರ್ಧರಿಸಿತು. ಕೇರಳ ಕ್ಯಾಬಿನೆಟ್ ಸಾಮಾನ್ಯವಾಗಿ ಪ್ರತಿ ಬುಧವಾರ ತಿರುವನಂತಪುರಂ ಸೆಕ್ರೆಟರಿಯೇಟ್ ಕ್ಯಾಬಿನೆಟ್ ಕೊಠಡಿಯಲ್ಲಿ ಸಭೆ ಸೇರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಹೊರತು ಪಡಿಸಿದರೆ, ರಾಜಧಾನಿಯ ಹೊರಗೆ ಕ್ಯಾಬಿನೆಟ್ ಸಭೆ ಕೇರಳದ ಇತರ ನಗರಗಳಲ್ಲಿ ನಡೆದಿರುವುದು ಅಪರೂಪವಾಗಿದೆ. ನವ ಕೇರಳ ಯೋಜನೆ ಪ್ರಗತಿಯಲ್ಲಿರುವಂತೆ ಮುಂಬರುವ ಬುಧವಾರದಂದು ವಿವಿಧ ಜಿಲ್ಲೆಗಳಲ್ಲಿ ಸಂಪುಟ ಸಭೆಗಳನ್ನು ನಡೆಸಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ಮಸೂದೆಗಳು ಬಾಕಿ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕೇರಳ ಸರ್ಕಾರ v/s ರಾಜ್ಯಪಾಲರ ಕಿತ್ತಾಟ