ವಾರಣಾಸಿ (ಉತ್ತರಪ್ರದೇಶ): ಪುಟ್ಬಾಲ್ ಪಂದ್ಯದಲ್ಲಿ ಸೋತಿದ್ದಾರೆ ಎಂಬ ಕಾರಣಕ್ಕೆ ಬಾಲಕರಿಗೆ ಕೋಚ್ವೋರ್ವ ಮನ ಬಂದಂತೆ ಥಳಿಸಿದ್ದಾನೆ. ಕೋಲು, ಬೆಲ್ಟ್ ಮತ್ತು ಚಪ್ಪಲಿಯಿಂದ ಮಕ್ಕಳಿಗೆ ಹೊಡೆದಿದ್ದು, ಆರೋಪಿ ಕೋಚ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಈ ಘಟನೆ ನಡೆದಿದೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆವರಣದಲ್ಲಿ 11 ವರ್ಷದೊಳಗಿನವರ ಪುಟ್ಬಾಲ್ ಪಂದ್ಯಾವಳಿ ನಡೆದಿತ್ತು. ಈ ಪಂದ್ಯಾವಳಿ ಸೋತ ಕಾರಣಕ್ಕೆ ತಂಡದೊಂದರ ಕೋಚ್ ಮೊಹಮ್ಮದ್ ಶಾದಾಬ್ ಎಂಬುವವರು ಮೂವರು ಮಕ್ಕಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕೋಚ್ ಥಳಿತದ ಬಗ್ಗೆ ಬಾಲಕರು ಮನೆಗೆ ಮರಳಿದ ನಂತರ ಪೋಷಕರಿಗೆ ವಿವರಿಸಿದ್ದಾರೆ. ಅಂತೆಯೇ ಪೋಷಕರು ಮತ್ತು ಸ್ಥಳೀಯರು ಕೂಡಿಕೊಂಡು ಶಿವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಘಟನೆ ಬಗ್ಗೆ ಮಾತನಾಡಿರುವ ಥಳಿತಕ್ಕೊಳಗಾದ ಬಾಲಕನೊಬ್ಬ, ಪಂದ್ಯ ಮುಗಿಸಿ ರೂಮ್ಗೆ ಮರಳಿದ ಬಳಿಕ ನನಗೆ ಮತ್ತು ನನ್ನ ಇಬ್ಬರು ಸಹಪಾಠಿಗಳಿಗೆ ಕೋಚ್ ಮೊಹಮ್ಮದ್ ಶಾದಾಬ್ ಮನಸೋಇಚ್ಛೆ ಥಳಿಸಲು ಶುರು ಮಾಡಿದರು. ಕೋಲು, ಬೆಲ್ಟ್ ಮತ್ತು ಚಪ್ಪಲಿಗಳಿಂದ ಹೊಡೆದರು. ಅಷ್ಟೇ ಅಲ್ಲ, ಅವಾಚ್ಯ ಶಬ್ದಗಳಿಂದ ಬೈದರು ಎಂದು ತಿಳಿಸಿದ್ದಾನೆ.
ಇದನ್ನೂ ಓದಿ: ವೈದ್ಯ ದಂಪತಿ ತೆರಳುತ್ತಿದ್ದ ಕಾರು ಭೀಕರ ಅಪಘಾತ.. ತಾಯಿ-ಮಗಳು ಸಾವು, ತಂದೆ ಸ್ಥಿತಿ ಗಂಭೀರ