ಸಿರ್ಮೌರ್: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಜಾತಿ ಆಧಾರದ ಮೇಲೆ ಮದುವೆ ಕಾರ್ಯಕ್ರಮವೊಂದರಲ್ಲಿ ಊಟ ಬಡಿಸಿದ ಆರೋಪ ಪ್ರಕರಣ ತಡವಾಗಿ ಮುನ್ನೆಲೆಗೆ ಬಂದಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಯುವಕ ಇದು ಸಿರ್ಮೌರ್ ಜಿಲ್ಲೆಯ ಶಿಲ್ಲೈನಲ್ಲಿ ನಡೆದಿದೆ ಎಂದು ಹೇಳಿದ್ದಾರೆ.
ಸದ್ಯ 47 ಸೆಕೆಂಡ್‌ಗಳ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಮೈಕ್‌ನಲ್ಲಿ ವ್ಯಕ್ತಿಯೊಬ್ಬರು ಜಾತಿಯ ಆಧಾರದಲ್ಲಿ ಊಟ ನೀಡುವ ಬಗ್ಗೆ ಮಾತನಾಡುತ್ತಿರುವುದು ಕಂಡು ಬರುತ್ತದೆ. ವಿಡಿಯೋ ವೈರಲ್ ಆದ ನಂತರ ದಲಿತ ಶೋಷಣಾ ಮುಕ್ತಿ ಮಂಚ್ ಇದನ್ನು ತೀವ್ರವಾಗಿ ಖಂಡಿಸಿದೆ. ಈ ಪ್ರಕರಣದ ಸಂಪೂರ್ಣ ತನಿಖೆ ಮತ್ತು ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ.
ದಲಿತ ಶೋಷಣಾ ಮುಕ್ತಿ ಮಂಚ್ ಈ ವೈರಲ್ ವಿಡಿಯೋವನ್ನು ಜಿಲ್ಲೆಯ ಎಎಸ್ಪಿಗೆ ಕಳುಹಿಸಿದೆ. ದಲಿತ ಶೋಷಣ ಮುಕ್ತಿ ಮಂಚ್‌ನ ಜಿಲ್ಲಾ ಸಂಯೋಜಕ ಆಶಿಶ್‌ಕುಮಾರ್ ಮಾತನಾಡಿ, ಶಿಲ್ಲೈ ಪ್ರದೇಶದಲ್ಲಿ ನಡೆದ ಮದುವೆ ಸಮಾರಂಭದ ವಿಡಿಯೋ ವೈರಲ್ ಆಗಿದೆ. ಇಲ್ಲಿ ಜಾತಿ ಆಧಾರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಧ್ವನಿವರ್ಧಕದಲ್ಲಿ ಘೋಷಣೆ ಮಾಡಲಾಗುತ್ತಿದೆ. ಈ ಬಗ್ಗೆ ದಲಿತ ಶೋಷಣಾ ಮುಕ್ತಿ ಮಂಚ್‌ಗೆ ಲಿಖಿತ ದೂರು ನೀಡಲು ತಿಳಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಇನ್ಸ್ಟಾದಲ್ಲಿ 'ದೋಸ್ತಿ', ವರ್ಷಗಳ ಕಾಲ 'ಲಿವ್ ಇನ್ ರಿಲೇಶನ್ ಶಿಪ್'.. ಮದುವೆಯಾಗಿ ಏಳೇ ದಿನಕ್ಕೆ ಯುವಕ ಸೊಸೈಡ್!
ಈ ವಿಡಿಯೋ ಕುರಿತು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಪರವಾಗಿ ಶಿಲ್ಲೈ ಪೊಲೀಸ್ ಠಾಣೆಗೆ ಲಿಖಿತ ದೂರು ಕೂಡ ನೀಡಲಾಗಿದೆ. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಸಮಾರಂಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರನ್ನು ಪ್ರತ್ಯೇಕವಾಗಿ ಕೂರಿಸಿ, ಊಟ ಮಾಡುವಂತೆ ಹೇಳಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಭೀಮ್ ಆರ್ಮಿ ಪೊಲೀಸರಿಗೆ ಆಗ್ರಹಿಸಿದೆ.