ನವದೆಹಲಿ: ರಾಗಿ ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಹಿತಕಾರಿ. ರಾಗಿಯಲ್ಲಿನ ಪೋಷಕಾಂಶಗಳು ದೇಹಾರೋಗ್ಯಕ್ಕೆ ಅತ್ಯವಶ್ಯಕವಾದ ಕಾರಣ ಕೇಂದ್ರ ಸರ್ಕಾರ, ರಾಗಿ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಹಾರ ಸಚಿವಾಲಯದ ಕ್ಯಾಂಟೀನ್ಗಳು ಮತ್ತು ಸಭೆಗಳಲ್ಲಿ ರಾಗಿ ಆಹಾರವನ್ನೇ ಬಡಿಸಲು ನಿರ್ದೇಶಿಸಿದೆ.
ರಾಗಿಯಿಂದ ಮಾಡಿದ ತಿಂಡಿ, ರಾಗಿ ಬಿಸ್ಕತ್ತುಗಳು, ಕುಕೀಸ್, ಲಾಡೂಗಳು ಮತ್ತು ಬೇಯಿಸಿದ ರಾಗಿ ಚಿಪ್ಸ್ ಇತ್ಯಾದಿಗಳನ್ನು ಸಭೆಗಳಲ್ಲಿ ತಿಂಡಿಗಳ ರೂಪದಲ್ಲಿ ನೀಡಲು ಮೆನುವಿನಲ್ಲಿ ಸೇರಿಸಿಕೊಳ್ಳಬಹುದು ಎಂದು ಸಚಿವಾಲಯ ತಿಳಿಸಿದೆ. ರಾಗಿ ದೋಸೆ, ರಾಗಿ ವಡಾ, ರಾಗಿ ಪೂರಿ ಮತ್ತು ಇಡ್ಲಿ, ರಾಗಿ ಲಾಡು ಇತ್ಯಾದಿಗಳನ್ನು ಆಹಾರ ಸಚಿವಾಲಯದ ಕ್ಯಾಂಟೀನ್‌ಗಳ ಮೆನುವಿನಲ್ಲಿ ಬಳಸಬೇಕು. ಸಾಧ್ಯವಾದಷ್ಟು ಸ್ಥಳೀಯವಾಗಿ ಬೆಳೆಯಲಾಗುವ ರಾಗಿಯನ್ನು ಬಳಸಿ ಉತ್ಪನ್ನಗಳನ್ನು ತಯಾರಿಸಬೇಕು ಎಂದು ಅದು ಹೇಳಿದೆ.
2023 ನೇ ವರ್ಷವನ್ನು ಅಂತರರಾಷ್ಟ್ರೀಯ ರಾಗಿ ವರ್ಷ ಎಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ. ಅಲ್ಲದೇ ರಾಗಿಯನ್ನು ಹೆಚ್ಚು ಬಳಕೆಗೆ ತರುವ ಯೋಜನೆಯೂ ಇದರ ಹಿಂದಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ದೇಶದಲ್ಲಿ ರಾಗಿ ಸಂಗ್ರಹಣೆ ಮತ್ತು ಬಳಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ತೇಜಿಸುತ್ತಿದೆ. ಕೇಂದ್ರದ ವಿವಿಧ ಯೋಜನೆಗಳಾದ ಟಿಪಿಡಿಎಸ್, ಐಸಿಡಿಎಸ್, ಎಂಡಿಎಂ ಯೋಜನೆಗಳಲ್ಲಿ ಫಲಾನುಭವಿಗಳಿಗೆ ರಾಗಿಯನ್ನು ವಿತರಿಸಲಾಗುತ್ತಿದೆ.
ರಾಗಿ ಸೇವನೆಯು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಈಗಿನ ಜೀವನ ಶೈಲಿಯ ಕಾರಣದಿಂದ ಬರುವ ಹಲವು ರೋಗಗಳಿಗೆ ಇದು ಮದ್ದಾಗಿದೆ ಎಂದು ಎಂದು ಸಚಿವಾಲಯ ಹೇಳಿದೆ. ಜೀವಸತ್ವಗಳು, ಖನಿಜಗಳು, ಫೈಟೊ ರಾಸಾಯನಿಕಗಳು ಮತ್ತು ಆಹಾರದ ಫೈಬರ್ ಸೇರಿದಂತೆ ರಾಗಿಯಲ್ಲಿ ಪೋಷಕಾಂಶಗಳ ಹೆಚ್ಚಿನ ಸಾಂದ್ರತೆ ಇದೆ. ಅಪೌಷ್ಟಿಕತೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ನಿವಾರಿಸಲು ರಾಗಿ ಅತ್ಯುತ್ತಮ ಧಾನ್ಯವಾಗಿವೆ.
ಓದಿ: ಫ್ರೆಂಚ್ ಪ್ರಜೆಯ ನಿವಾಸದಲ್ಲಿ 20 ಪುರಾತನ ವಿಗ್ರಹಗಳು ಪತ್ತೆ: ವಶಕ್ಕೆ ಪಡೆದ ಐಡಲ್ ವಿಂಗ್ ಸಿಐಡಿ