ಮನಾಲಿ: ಹಿಮಾಚಲ ಪ್ರದೇಶದ ಮನಾಲಿ ಪ್ರವಾಸಿಗರ ಸ್ವರ್ಗ. ಇಲ್ಲಿಗೆ ಭೇಟಿ ನೀಡುವ ಜನರು ಪ್ರಕೃತಿ ಸೌಂದರ್ಯ ಸವಿಯುವುದರೊಂದಿಗೆ ರಿವರ್ ರಾಫ್ಟಿಂಗ್, ಪ್ಯಾರಾಗ್ಲೈಡಿಂಗ್ ಸಾಹಸ ಕ್ರೀಡೆಗಳಲ್ಲಿ ಭಾಗಿಯಾಗಿ ಎಂಜಾಯ್ ಮಾಡುತ್ತಾರೆ. ಇದಲ್ಲದೇ, ದೇಶದ ಮೂರನೇ 'ಫ್ಲೈಯಿಂಗ್ ರೆಸ್ಟೋರೆಂಟ್' ಅನ್ನು ಮನಾಲಿಯಲ್ಲಿ ಆರಂಭಿಸಲಾಗಿದ್ದು, ಈ ಫ್ಲೈ ಡೈನಿಂಗ್ ರೆಸ್ಟೋರೆಂಟ್ ಮನಾಲಿ ತಲುಪುವ ಪ್ರವಾಸಿಗರ ಮೊದಲ ಆಯ್ಕೆಯಾಗಿದೆ.
ಇದರ ವಿಶೇಷತೆ ಏನು?:
1. ಫ್ಲೈಯಿಂಗ್ ರೆಸ್ಟೋರೆಂಟ್ ಇದೊಂದು ಗಾಳಿಯಲ್ಲಿ ತೇಲಾಡುವ ಅನುಭವವನ್ನು ನೀಡುತ್ತದೆ.
2. ಭೂಮಿಯಿಂದ 160 ಅಡಿ ಎತ್ತರದಲ್ಲಿ ಕುಳಿತು ಆಹಾರ ಸೇವಿಸವ ರೆಸ್ಟೋರೆಂಟ್ ಇದಾಗಿದೆ.
3. 24 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಈ ಡೆಕ್ ಅನ್ನು ಹೈಡ್ರಾಲಿಕ್ ಕ್ರೇನ್ ಮೂಲಕ ಜೋಡಿಸಲಾಗಿದೆ.
4. 160 ಅಡಿ ಎತ್ತರದಲ್ಲಿ ನಿಂತು ಆಹಾರ ಸವಿಯಬಹುದು. ಇದರಲ್ಲಿ ಒಬ್ಬ ಬಾಣಸಿಗ ಮತ್ತು ಮಾಣಿ ಕೂಡ ಊಟ ಬಡಿಸಲು ಇರುತ್ತಾರೆ. ಇದೊಂದು ಗಾಳಿಯಲ್ಲಿ ತೇಲುತ್ತಿರುವ ಡೈನಿಂಗ್ ಟೇಬಲ್‌ನಂತೆ ಕಾಣುತ್ತದೆ.
5. ಇಲ್ಲಿ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿಗೂ ಕೂಡ ರೆಸ್ಟೋರೆಂಟ್ ಅವಕಾಶ ನೀಡಿದೆ. ಫ್ಲೈಯಿಂಗ್ ರೆಸ್ಟೋರೆಂಟ್ ಅನ್ನು 45 ನಿಮಿಷಗಳವರೆಗೆ ಬಳಸಿಕೊಳ್ಳಬಹುದು.
160 ಅಡಿಗಳಲ್ಲಿ ಊಟ ಮತ್ತು ಸಾಹಸ: ಹೈಡ್ರಾಲಿಕ್ ಕ್ರೇನ್ ಸಹಾಯದಿಂದ ಗಾಳಿಯಲ್ಲಿ ತೇಲಾಡುವ ಡೈನಿಂಗ್ ಟೇಬಲ್‌ನಲ್ಲಿ ಕುಳಿತಿರುವ ಜನರು ಮನಾಲಿಯ 360 ಡಿಗ್ರಿ ವೀಕ್ಷಣೆಯ ಅನುಭವ ಪಡೆಯಬಹುದು. ಕುಳಿತಲ್ಲಿಂದಲೇ ರೋಹ್ಟಾಂಗ್‌ನಿಂದ ಹಮ್ತಾದವರೆಗಿನ ಬೆಟ್ಟಗಳನ್ನು ವೀಕ್ಷಿಸಬಹುದು. ರಾತ್ರಿಯ ವೇಳೆ ದೀಪಗಳಿಂದ ಅಲಂಕೃತಗೊಂಡ ಈ ಫ್ಲೈಯಿಂಗ್ ರೆಸ್ಟೋರೆಂಟ್ ಮಿನುಗುತ್ತಿರುತ್ತದೆ. ಬಿಸಿಲು ಮತ್ತು ಮಳೆಯಿಂದ ರಕ್ಷಿಸುವ ಮತ್ತು ಅಪಾಯಕ್ಕೀಡಾಗದ ರೀತಿ ಇದನ್ನು ನಿರ್ಮಿಸಲಾಗಿದೆ.
ಹಿಮಾಚಲದ ಮೊದಲ ಮತ್ತು ದೇಶದ ಮೂರನೇ ಫ್ಲೈಯಿಂಗ್ ರೆಸ್ಟೋರೆಂಟ್ ಇದಾಗಿದೆ. ಈ ರೀತಿಯ ರೆಸ್ಟೋರೆಂಟ್ ನೋಯ್ಡಾ ಮತ್ತು ಗೋವಾದಲ್ಲಿವೆ. ರೆಸ್ಟೋರೆಂಟ್ ನಿರ್ವಾಹಕರ ಪ್ರಕಾರ, ರೆಸ್ಟೋರೆಂಟ್ ಪ್ರಾರಂಭವಾದಾಗಿನಿಂದ ಮನಾಲಿಗೆ ಬರುವ ಪ್ರವಾಸಿಗರಲ್ಲಿ ಇದು ಕ್ರೇಜ್ ಹುಟ್ಟಿಸಿದೆ. ಸ್ಪಾಟ್ ಬುಕಿಂಗ್ ಜೊತೆಗೆ ಆನ್‌ಲೈನ್ ಬುಕಿಂಗ್ ಸೌಲಭ್ಯವೂ ಇದೆ. ಇಲ್ಲಿ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಕೂಡ ಅವಕಾಶ ನೀಡಲಾಗುತ್ತದೆ. ಫ್ಲೈಯಿಂಗ್ ರೆಸ್ಟೋರೆಂಟ್ ಪ್ರವೇಶಕ್ಕಾಗಿ ಪ್ರತಿ ವ್ಯಕ್ತಿಗೆ 3999 ರೂಪಾಯಿ ನಿಗದಿ ಮಾಡಲಾಗಿದೆಯಂತೆ.
ಇದನ್ನೂ ಓದಿ: ನಾಲ್ಕು ಕೈ-ಕಾಲುಗಳಿದ್ದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ನುಡಿದಂತೆ ನಡೆದ ಸೋನುಸೂದ್ಗೆ ಮೆಚ್ಚುಗೆ