ಗುವಾಹಟಿ: ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದು, ಪ್ರಮುಖ ನದಿಗಳಾದ ಬ್ರಹ್ಮಪುತ್ರ, ಬರಾಕ್ ಮತ್ತು ಅವುಗಳ ಕೆಲವು ಉಪನದಿಗಳು ಇನ್ನೂ ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿವೆ. ASDMA ವರದಿಯ ಪ್ರಕಾರ, ಶೇ.6.62 ರಷ್ಟು ಜನ ಪ್ರವಾಹದಿಂದ ತೊಂದರೆಗೆ ಒಳಗಾಗಿದ್ದಾರೆ. 27 ಜಿಲ್ಲೆಗಳು ಸೇರಿದಂತೆ ಸುಮಾರು 1,413 ಹಳ್ಳಿಗಳು ಪ್ರವಾಹದಲ್ಲಿ ಸಿಲುಕಿವೆಯಂತೆ.
ನಾಗಾವ್ ಜಿಲ್ಲೆಯಲ್ಲಿ 2.8 ಲಕ್ಷ ಜನರು ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. ಕ್ಯಾಚಾರ್‌ನಲ್ಲಿ 1.19 ಲಕ್ಷ ಮತ್ತು ಹೊಜೈ ಜಿಲ್ಲೆಯಲ್ಲಿ 1.07 ಲಕ್ಷ ಜನರು ಬಾಧಿತರಾಗಿದ್ದಾರೆ. ರಾಜ್ಯಾದ್ಯಂತ ಸ್ಥಾಪಿಸಲಾಗಿರುವ 248 ಪರಿಹಾರ ಶಿಬಿರಗಳಲ್ಲಿ ಒಟ್ಟು 48,304 ಜನರು ಆಶ್ರಯ ಪಡೆದಿದ್ದಾರೆ. ವರದಿಯ ಪ್ರಕಾರ, ಇದುವರೆಗೆ ಒಂಬತ್ತು ಜನರು ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕ್ಯಾಚಾರ್ ಜಿಲ್ಲಾಡಳಿತವು ಶಾಲೆಗಳನ್ನು ಮುಚ್ಚಲು ನಿರ್ದೇಶನ ನೀಡಿದೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಲಘು ವಾಹನಗಳ ಸಂಚಾರವನ್ನು ನಿಷೇಧಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಐಎಸ್‌ಐ ಪರವಾಗಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸ್
ಮಂಗಳವಾರದಿಂದ ಅಸ್ಸೋಂನ ಬರಾಕ್ ಕಣಿವೆ, ದಿಮಾ ಹಸಾವೊ ಜಿಲ್ಲೆ ಮತ್ತು ನೆರೆಯ ರಾಜ್ಯಗಳಾದ ತ್ರಿಪುರಾ, ಮಿಜೋರಾಂ, ಮಣಿಪುರಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಾರಣ ನಿರಂತರ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಅಸ್ಸೋಂ ಮತ್ತು ಮೇಘಾಲಯದ ಅನೇಕ ಸ್ಥಳಗಳಲ್ಲಿ ರಸ್ತೆ, ರೈಲ್ವೆ ಹಳಿಗಳು ಕೊಚ್ಚಿಕೊಂಡು ಹೋಗಿವೆ.