ಉನಾ (ಹಿಮಾಚಲ ಪ್ರದೇಶ) : ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮೇಘ ಸ್ಫೋಟದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದಾಗಿ ಕೆಲವೆಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಪರದಾಡುತ್ತಿದ್ದಾರೆ.
ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ವೇಳೆ ರುದ್ರಭೂಮಿಗೆ ನೀರು ನುಗ್ಗಿರುವ ಘಟನೆ ಉನಾ ಜಿಲ್ಲೆಯ ಚಧತ್ ಗ್ರಾಮದಲ್ಲಿ ನಡೆಯಿತು. ರುದ್ರ ಭೂಮಿಗೆ ಏಕಾಏಕಿ ನೀರು ನುಗ್ಗಿದ್ದರಿಂದ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ್ದ ಜನರು ನೀರಿನಲ್ಲಿ ಸಿಲುಕಿ ತೊಂದರೆ ಅನುಭವಿಸಿದರು. ಜನರನ್ನು ಸ್ಥಳದಿಂದ ಸ್ಥಳಾಂತರಿಸುವ ಕಾರ್ಯ ನಡೆಯಿತು.
ಗುರುವಾರ ಉನಾ ಜಿಲ್ಲೆಯ ಚಧತ್ ಗ್ರಾಮದ ಸುಖರಾಮ್ ಎಂಬವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಸಂಜೆ ಸುಖರಾಮ್ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದರು. ಈ ವೇಳೆ ಧಾರಾಕಾರ ಮಳೆಯಾಗಲು ಶುರುವಾಗಿದೆ. ಕುಟುಂಬಸ್ಥರು ಮಳೆನಿಂತ ಬಳಿಕ ರುದ್ರಭೂಮಿಗೆ ತೆರಳಲು ನಿರ್ಧರಿಸಿದರು. ಮಳೆ ನಿಂತ ಬಳಿಕ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು. ಅಲ್ಲದೇ ಚಿತೆಗೆ ಬೆಂಕಿ ಹಚ್ಚಲಾಗಿತ್ತು.
ಈ ವೇಳೆ ಏಕಾಏಕಿ ಮಳೆ ನೀರು ರುದ್ರಭೂಮಿಗೆ ನುಗ್ಗಿತು. ಶವ ಸಂಸ್ಕಾರಕ್ಕೆ ಆಗಮಿಸಿದ್ದ 130ಕ್ಕೂ ಹೆಚ್ಚು ಮಂದಿ ರುದ್ರಭೂಮಿಯಲ್ಲಿ ಸಿಲುಕಿದ್ದಾರೆ. ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದರಿಂದ ರುದ್ರಭೂಮಿಯಲ್ಲಿನ ಗೋಡೆಗಳನ್ನು ಒಡೆದು ನೀರು ಹೋಗಲು ಅನುವು ಮಾಡಿ ಕೊಡಲಾಯಿತು. ಆದರೂ ನೀರಿನ ಪ್ರಮಾಣ ಇಳಿಕೆಯಾಗದೇ ಇದ್ದುದರಿಂದ ತಕ್ಷಣ ಪ್ರಾಣ ಉಳಿಸಿಕೊಳ್ಳಲು ಅಲ್ಲಿಯೇ ಇದ್ದ ಕೊಠಡಿಯ ಛಾವಣಿ ಹತ್ತಿದ್ದಾರೆ. ಸುಮಾರು 5ರಿಂದ 6 ಅಡಿ ನೀರು ನಿಂತಿತ್ತು ಎಂದು ತಿಳಿದುಬಂದಿದೆ.
ಈ ಬಗ್ಗೆ ತಕ್ಷಣ ಗ್ರಾಮಸ್ಥರು ಉನಾ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಸಿಲುಕಿದ್ದ 130 ಮಂದಿಯನ್ನು ರಕ್ಷಣೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ಎಸ್‌ಡಿಎಂ ಉನಾ ವಿಶ್ವ ದೇವ್ ಮೋಹನ್ ಚೌಹಾಣ್ ಅವರು ರಕ್ಷಣಾ ಕಾರ್ಯಾಚರಣೆ ನೇತೃತ್ವ ವಹಿಸಿದರು.
ಜೆಸಿಬಿ ಸಹಾಯದಿಂದ ರುದ್ರ ಭೂಮಿಗೆ ಹೋಗುವ ರಸ್ತೆಯನ್ನು ಸರಿಪಡಿಸಲಾಯಿತು. ಸುಮಾರು ಎರಡು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ ನಂತರ ಎಲ್ಲರನ್ನೂ ಸುರಕ್ಷಿತವಾಗಿ ಹೊರಕ್ಕೆ ತರಲಾಯಿತು. ಈ ವೇಳೆ ಮಾತನಾಡಿದ ಸ್ಥಳೀಯ ಜಿಪು ತಿಂದ್, "ಈ ರುದ್ರಭೂಮಿಯಲ್ಲಿ ಈ ಹಿಂದೆಯೂ ಇಂತಹ ಸಮಸ್ಯೆಗಳು ಎದುರಾಗಿತ್ತು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮಾಹಿತಿ ನೀಡಿದರೂ ಏನೂ ಪ್ರಯೋಜನ ಆಗಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಕ್ರಮಕೈಗೊಳ್ಳಬೇಕು" ಎಂದು ಆಗ್ರಹಿಸಿದರು.
ಭೂ ಕುಸಿತ, ಪ್ರವಾಹದಿಂದ ತತ್ತರಿಸಿದ ಜನರು : ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ರಾಜ್ಯದ ಹಲವು ಸ್ಥಳಗಳಲ್ಲಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿದೆ. ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ಮೈಲುಗಳಷ್ಟು ದೂರ ಟ್ರಾಫಿಕ್ ಜಾಮ್‌ಗೆ ಉಂಟಾಗಿತ್ತು.
ಇದನ್ನೂ ಓದಿ : Himachal floods: ಹಿಮಾಚಲ ಪ್ರದೇಶದಲ್ಲಿ ಪ್ರವಾಹ: 6 ಸಾವು, ಹೆದ್ದಾರಿಯಲ್ಲಿ ಭೂಕುಸಿತ, ನೂರಾರು ಜನರ ಪರದಾಟ