ಕೊಯಮತ್ತೂರು(ತಮಿಳುನಾಡು): ಇಬ್ಬರು ಸಹೋದರರು ಸೇರಿದಂತೆ ಐವರು ಯುವಕರು ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವಾಲ್ಪಾರೈನಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ಎಸ್. ನಫಿಲ್, ಆರ್. ಅಜಯ್, ಆರ್. ಧನುಷ್, ಆರ್. ವಿನಿತ್ ಮತ್ತು ಶರತ್ ಎಂದು ಗುರುತಿಸಲಾಗಿದೆ.
ನಫಿಲ್, ಅಜಯ್, ಮತ್ತು ಧನುಷ್ ಬಿಎಸ್ಸಿ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕೊಯಮತ್ತೂರು ಸಮೀಪದ ಖಾಸಗಿ ಕಾಲೇಜಿನಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿನಿತ್ ಇತ್ತೀಚೆಗಷ್ಟೇ ಎಂ.ಎಸ್ಸಿ ಮುಗಿಸಿದ್ದ. ಶುಕ್ರವಾರದಂದು ಐವರು ಸ್ನೇಹಿತರು ವಾಲ್ಪಾರೈಗೆ ಪ್ರವಾಸ ಕೈಗೊಂಡಿದ್ದರು.
ಯುವಕರ ಗುಂಪು ಸಂಜೆ ನಲ್ಲಕಾತು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಐವರೂ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆಯು ಸಂಜೆ 5 ಗಂಟೆಗೆ ವರದಿಯಾಗಿದೆ. ವಾಲ್ಪಾರೈನಲ್ಲಿ ಬೀಡುಬಿಟ್ಟಿದ್ದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ವಿ. ಮುತ್ತುಪಾಂಡಿ ನೇತೃತ್ವದ ರಕ್ಷಣಾ ತಂಡವು ಒಂದು ಗಂಟೆಯೊಳಗೆ ಎಲ್ಲ ಐದು ಮೃತದೇಹಗಳನ್ನು ಹೊರಗೆ ತೆಗೆದರು. ನಂತರ ಪೊಲೀಸರು ಸಂತ್ರಸ್ತರ ಮೃತದೇಹಗಳನ್ನು ವಾಲ್ಪಾರೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.
ಇದನ್ನೂ ಓದಿ: ಜಮ್ಮುನಲ್ಲಿ ಕಂದಕಕ್ಕೆ ಉರುಳಿ ಬಿದ್ದ ಟ್ರಕ್: ಸ್ಥಳದಲ್ಲೇ ನಾಲ್ವರು ಸಾವು