ಜೈಪುರ(ರಾಜಸ್ಥಾನ): ಜೈಪುರದ ಟ್ರಾನ್ಸ್ಪೋರ್ಟ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಾಪರಾಧಿ ಗೃಹದಲ್ಲಿ ತಂಗಿದ್ದ ಐವರು ಹುಡುಗರು ಇನ್ನಿಬ್ಬರು ಹುಡುಗರ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಬಳಿಕ ಅಸಹಜ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈ ವಿಷಯವನ್ನು ಯಾರಿಗೂ ತಿಳಿಸಿದಂತೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಘಟನೆ ಬುಧವಾರ ಜೈಲಾಧಿಕಾರಿಗಳ ಗಮನಕ್ಕೆ ಬಂದಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.
ಬಾಲಾಪರಾಧಿ ಗೃಹದಲ್ಲಿ ತಂಗಿರುವ ಖೈದಿ ಸಂಖ್ಯೆ 256 (ಬಾಲಕ) ರಾತ್ರಿ ತನ್ನ ಕೋಣೆಯಲ್ಲಿ ಮಲಗಿದ್ದ. ಅದೇ ಸಮಯದಲ್ಲಿ ಆತನ ಕೋಣೆಗೆ ನುಗ್ಗಿದ ಐವರು ಮೊದಲು ಹಲ್ಲೆ ನಡೆಸಿದ್ದಾರೆ. ನಂತರ ಪ್ಯಾಂಟ್ ಹರಿದು ದುಷ್ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಪೊಲೀಸರಿಗೆ ತಿಳಿಸಿದ್ದಾನೆ. ಇಷ್ಟೇ ಅಲ್ಲ, ಕಳೆದ ಕೆಲವು ದಿನಗಳಿಂದಲೂ ನನ್ನ ಮೇಲೆ ಆ ಐವರು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದೂ ತಿಳಿಸಿದ್ದಾನೆ.
ಜುವನೈಲ್ ಹೋಮ್‌ನಲ್ಲಿ ವಾಸವಾಗಿದ್ದ 18 ಮತ್ತು 24 ವರ್ಷದ ಇಬ್ಬರ ಮೇಲೆ 18 ರಿಂದ 20 ವರ್ಷದ ಐವರು ಕೈದಿಗಳು ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪವಿದೆ. ಕೊಲೆ ಬೆದರಿಕೆ ಮತ್ತು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಅದಾರನಗರ ಎಸಿಪಿ ಹವಾಸಿಂಗ್ ತಿಳಿಸಿದರು.
ಒಂದೇ ಕಟ್ಟಡದಲ್ಲಿ ಎರಡು ಕೇಂದ್ರಗಳು: ಇಲ್ಲಿನ ಬಾಲಾಪರಾಧಿ ಗೃಹದಲ್ಲಿ ಎರಡು ಕೇಂದ್ರಗಳಿವೆ. ಒಂದರಲ್ಲಿ 18 ವರ್ಷದೊಳಗಿನ ಮಕ್ಕಳು ವಾಸವಿದ್ದು, ಇನ್ನೊಂದು ಕೇಂದ್ರದಲ್ಲಿ 18 ವರ್ಷ ಮೇಲ್ಪಟ್ಟವರು ತಂಗಿದ್ದಾರೆ. ಎರಡೂ ಕೇಂದ್ರಗಳು ಒಂದೇ ಕಟ್ಟಡದಲ್ಲಿದ್ದ ಕಾರಣ ಈ ಘಟನೆ ನಡೆದಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.
ಇದನ್ನೂ ಓದಿ: Kalburgi Rape and murder Case: ಅಶ್ಲೀಲ ವಿಡಿಯೋಗಳನ್ನು ನೋಡಿ ಪ್ರಚೋದನೆಗೊಂಡು ಕೃತ್ಯ!