ಗುವಾಹಟಿ (ಅಸ್ಸೋಂ): ವಿವಿಧ ಸೇವಾ ಪೂರೈಕೆದಾರರಿಂದ ವಂಚನೆಯಿಂದ ಸಿಮ್ ಕಾರ್ಡ್‌ಗಳನ್ನು ಪಡೆದುಕೊಂಡು ಕೆಲವು ಪಾಕಿಸ್ತಾನಿ ಏಜೆಂಟರಿಗೆ ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಅಸ್ಸೋಂ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಆಶಿಕುಲ್ ಇಸ್ಲಾಂ, ಬೋಡೋರ್ ಉದ್ದೀನ್, ಮಿಜಾನುರ್ ರೆಹಮಾನ್, ವಹಿದುಜ್ ಜಮಾನ್ ಮತ್ತು ಬಹರುಲ್ ಇಸ್ಲಾಂ ಎಂದು ಗುರುತಿಸಲಾಗಿದೆ.
ಈ ಐವರು ಮಧ್ಯ ಅಸ್ಸೋಂನ ನಾಗಾಂವ್ ಮತ್ತು ಮೊರಿಗಾಂವ್ ಜಿಲ್ಲೆಗಳಿಗೆ ಸೇರಿದವರು ಎಂಬುದಾಗಿ ತಿಳಿದು ಬಂದಿದೆ. ಅವರ ಬಳಿಯಿದ್ದ 18 ಮೊಬೈಲ್ ಫೋನ್‌ಗಳು, 136 ಸಿಮ್ ಕಾರ್ಡ್‌ಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇಂದ್ರ ಏಜೆನ್ಸಿಯ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಐಜಿಪಿ ಪ್ರಶಾಂತ್ ಕುಮಾರ್ ಭುಯಾನ್ (ಎಲ್ & ಒ) ಮತ್ತು ಅಸ್ಸೋಂ ಪೊಲೀಸ್ ವಕ್ತಾರರು ಎಎನ್‌ಐಗೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಬಂಧನ: "ಕೇಂದ್ರ ಏಜೆನ್ಸಿಯ ಇನ್‌ಪುಟ್‌ಗಳು ಮತ್ತು ವಿಶ್ವಾಸಾರ್ಹ ಮೂಲಗಳ ಪ್ರಕಾರ, ನಾಗಾವ್ ಮತ್ತು ಮೊರಿಗಾಂವ್ ಜಿಲ್ಲೆಗಳ ಸುಮಾರು 10 ಜನರು ವಿವಿಧ ಸೇವಾ ಪೂರೈಕೆದಾರರಿಂದ ಸಿಮ್ ಕಾರ್ಡ್‌ಗಳನ್ನು ವಂಚನೆಯಿಂದ ಪಡೆದುಕೊಳ್ಳುವಲ್ಲಿ ತೊಡಗಿಸಿಕೊಂಡಿದ್ದಾರೆ. ನಂತರ ಅವರು ಪಾಕಿಸ್ತಾನಿ ಏಜೆಂಟರಿಗೆ ಅವುಗಳನ್ನು ಪೂರೈಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ರಾಷ್ಟ್ರದ ಸಮಗ್ರತೆ ಮತ್ತು ಸಾರ್ವಭೌಮತ್ವ ಕಾಪಾಡುವ ದೃಷ್ಟಿಯಿಂದ ನಿನ್ನೆ ರಾತ್ರಿ ಹೆಚ್ಚುವರಿ ಎಸ್ಪಿ (ಅಪರಾಧ), SDPO ಕಲಿಯಾಬೋರ್ ಮತ್ತು ನಾಗಾಂವ್ ಜಿಲ್ಲೆಯ ಹಲವಾರು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕೊನೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ' ಎಂದು ಪ್ರಶಾಂತ ಕುಮಾರ್ ಭುಯಾನ್ ಹೇಳಿದರು.
ಅವರ ಬಳಿ ಇದ್ದ 18 ಮೊಬೈಲ್ ಫೋನ್‌ಗಳು, 136 ಸಂಖ್ಯೆಯ ಸಿಮ್ ಕಾರ್ಡ್‌ಗಳು, ಒಂದು ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಒಂದು ಹೈಟೆಕ್ ಸಿಪಿಯು, ಕೆಲವು ಸಂಬಂಧಿತ ದಾಖಲೆಗಳನ್ನು (ಜನನ ಪ್ರಮಾಣಪತ್ರಗಳು, ಪಾಸ್‌ಬುಕ್‌ಗಳು, ಫೋಟೋಗ್ರಾಫ್‌ಗಳು ಇತ್ಯಾದಿ) ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಐಬಿ ಅಧಿಕಾರಿಗಳ ಸಹಯೋಗದಲ್ಲಿ ವಿಚಾರಣೆ: 'ಇದುವರೆಗಿನ ವಿಚಾರಣೆಯಲ್ಲಿ ತಿಳಿದು ಬಂದಿರುವ ಪ್ರಕಾರ, ಆರೋಪಿ ಅಶಿಕುಲ್ ಇಸ್ಲಾಂ ಎರಡು IMEI ಸಂಖ್ಯೆಗಳನ್ನು ಹೊಂದಿರುವ ಮೊಬೈಲ್ ಹ್ಯಾಂಡ್‌ಸೆಟ್ ಅನ್ನು ಬಳಸುತ್ತಿರುವುದು ಬಹಿರಂಗವಾಗಿದೆ. ಇದರಿಂದ ಭಾರತೀಯ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು ವಿದೇಶಿ ರಾಯಭಾರ ಕಚೇರಿಯೊಂದಿಗೆ ಹಂಚಿಕೊಳ್ಳಲು ವಾಟ್ಸ್ಆ್ಯಪ್ ಕರೆ ಮಾಡಲಾಗಿದೆ. (ಐಬಿ ಹಂಚಿಕೊಂಡ ಇನ್ಪುಟ್). ಈತನ ಬಳಿ ಹ್ಯಾಂಡ್‌ಸೆಟ್ ಪತ್ತೆಯಾಗಿದೆ. ಇತರ ವ್ಯಕ್ತಿಗಳೂ ಈ ಸಂಬಂಧ ತಾಂತ್ರಿಕವಾಗಿ ಭಾಗಿಯಾಗಿರುವುದು ಕಂಡು ಬಂದಿದೆ. ಐಬಿ ಅಧಿಕಾರಿಗಳ ಸಹಯೋಗದಲ್ಲಿ ಬಂಧಿತರನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಾಗುತ್ತಿದೆ' ಎಂದು ಪ್ರಶಾಂತ ಕುಮಾರ್ ಭುಯಾನ್ ಹೇಳಿದ್ದಾರೆ.
ನಾಗಾವ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 120(ಬಿ), 121(ಎ), 419, 468, 471, 34, ಯುಎ(ಪಿ) ಕಾಯ್ದೆ 1967 ರ ಆರ್/ಡಬ್ಲ್ಯೂ ಸೆಕ್ಷನ್ 18, 18ಬಿ, 19 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಉಮೇಶ್ ಪಾಲ್ ಕೊಲೆ ಕೇಸ್: ಆರೋಪಿ ಎನ್‌ಕೌಂಟರ್ ಬಗ್ಗೆ ಪತ್ನಿ ಆಕ್ಷೇಪ.. ನನ್ನ ಪತಿ, ಪೊಲೀಸರ ಮಧ್ಯೆ ಏನು ವ್ಯತ್ಯಾಸ ಎಂದು ಪ್ರಶ್ನೆ