ಬಿಷ್ಣುಪುರ(ಮಣಿಪುರ): ಈಶಾನ್ಯ ರಾಜ್ಯ ಮಣಿಪುರದಲ್ಲಿ ಸಂಘರ್ಷ ಮತ್ತೆ ಭುಗಿಲೆದ್ದಿದೆ. ಬಿಷ್ಣುಪುರ ಜಿಲ್ಲೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ನಿಂಗ್ಟೌಖೋಂಗ್ ಖಾ ಖುನೌ ಪ್ರದೇಶದಲ್ಲಿ ಘಟನೆ ನಡೆದಿದೆ. ಮೃತರಲ್ಲಿ ತಂದೆ, ಮಗ ಕೂಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಡ್ಡಗಾಡು ಪ್ರದೇಶದಿಂದ ಬಂದ ಐದಾರು ಮಂದಿ ದುಷ್ಕರ್ಮಿಗಳು ಕೃಷಿ ಕಾರ್ಮಿಕರನ್ನು ಸೆರೆಹಿಡಿದು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡು ಹಾರಿಸಿ ಕೊಂದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಸಶಸ್ತ್ರ ಬಂಡುಕೋರರ ಗುಂಪುಗಳು ನಡೆಸಿದ ಗುಂಡಿನ ದಾಳಿಯಲ್ಲಿ ಗ್ರಾಮದ ಸ್ವಯಂಸೇವಕರೊಬ್ಬರು ಸಾವನ್ನಪ್ಪಿದ್ದಾರೆ. ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಎರಡು ಪ್ರತಿಸ್ಪರ್ಧಿ ಬಣಗಳ ನಡುವಿನ ಘರ್ಷಣೆ ಗುಂಡಿನ ದಾಳಿಗೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗುಡ್ಡಗಾಡು ಪ್ರದೇಶಗಳ ಬಂಡುಕೋರರು ಕಾಂಗ್‌ಚುಪ್ ಗ್ರಾಮದ ಮೇಲೆ ಮೊದಲು ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಕೂಡಾ ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಗಂಡು ತಗುಲಿ ಗ್ರಾಮದ ಸ್ವಯಂಸೇವಕ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ಬೃಹತ್ ಪ್ರತಿಭಟನೆ: ಸ್ವಯಂಸೇವಕನ ಸಾವಿನ ಬಳಿಕ ಮಹಿಳೆಯರು ಸೇರಿ ಇಂಫಾಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಕೇಂದ್ರ, ರಾಜ್ಯ ಭದ್ರತಾ ಪಡೆಗಳ ಸಮನ್ವಯಕ್ಕಾಗಿ ಸ್ಥಾಪಿಸಲಾದ ಏಕೀಕೃತ ಕಮಾಂಡ್‌ನ ಅಧ್ಯಕ್ಷರಾದ ಕುಲದೀಪ್ ಸಿಂಗ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಸಿಎಂ ನಿವಾಸ ಮತ್ತು ರಾಜಭವನಕ್ಕೂ ಮಹಿಳೆಯರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ರಾಜಭವನದಿಂದ 300 ಮೀಟರ್ ದೂರದಲ್ಲಿ ಪೊಲೀಸರು ಮಹಿಳೆಯರನ್ನು ತಡೆಯಲೆತ್ನಿಸಿದಾಗ ಘರ್ಷಣೆ ನಡೆದಿದೆ. ಈ ಸಂದರ್ಭದಲ್ಲಿ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಫಯೆಂಗ್, ಕಡಂಗ್‌ಬಂಡ್ ಮತ್ತು ಕೌತ್ರಕ್ ಪ್ರದೇಶಗಳು ಹಾಗು ಇಂಫಾಲ್ ಪೂರ್ವದ ವಿವಿಧ ಭಾಗಗಳು, ಕಾಂಗ್‌ಪೋಕ್ಪಿ ಮತ್ತು ಬಿಷ್ಣುಪುರ್ ಜಿಲ್ಲೆಗಳಲ್ಲಿ ಅಂತರ-ಬುಡಕಟ್ಟು ಸಮುದಾಯಗಳ ನಡುವೆ ಗುಂಡಿನ ದಾಳಿ ನಡೆದಿದೆ. ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿವೆ.
ಬುಧವಾರದಿಂದ ಮಣಿಪುರದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಪೊಲೀಸ್ ಕಮಾಂಡೋಗಳು ಸೇರಿದಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ. ಮೊರೆ ಜಿಲ್ಲೆಯಲ್ಲಿ ಇಬ್ಬರು ಪೊಲೀಸರ ಹತ್ಯೆಯಲ್ಲಿ ಮ್ಯಾನ್ಮಾರ್ ಉಗ್ರರ ಕೈವಾಡದ ಬಗ್ಗೆ ಅಧಿಕಾರಿಗಳು ಶಂಕಿಸಿದ್ದಾರೆ.
ಇದನ್ನೂ ಓದಿ: ಮಣಿಪುರ: ಉಗ್ರರು-ಭದ್ರತಾಪಡೆಗಳ ನಡುವೆ ಗುಂಡಿನ ಚಕಮಕಿ