ಚುರು (ರಾಜಸ್ಥಾನ): ರಾಜಸ್ಥಾನದ ಚುರು ಜಿಲ್ಲೆಯ ಸರ್ದಾರ್ಶಹರ್ನಲ್ಲಿ ಲಾರಿ ಮತ್ತು ಬೊಲೆರೋ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಸಾವನ್ನಪ್ಪಿದ್ದು, 7 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಕಮಲಾದೇವಿ (55), ಅಣ್ಣಾರಾಮ್ (35), ಸಂತೋಷ್ (35), ಮೋನಿಕಾ (10) ಮತ್ತು ಸರೋಜ್ (28) ಮೃತರು ಎಂದು ಗುರುತಿಸಲಾಗಿದೆ.
ಬಿರಾಮ್‌ಸರ್ ಧಾಮ್‌ಗೆ ಭೇಟಿ ನೀಡಿ ಹನುಮಾನ್‌ಗಢದಿಂದ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೊಲೆರೋದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ರಾಜಸರ್ ಗ್ರಾಮದ ನಿವಾಸಿಗಳು ಎಂದು ಸರ್ದಾರ್ಶಹರ್ ಪೊಲೀಸ್ ಅಧಿಕಾರಿ ಮದನ್‌ಲಾಲ್ ವಿಷ್ಣೋಯ್ ತಿಳಿಸಿದ್ದಾರೆ.
ಗಾಯಗೊಂಡವರನ್ನು ಖಾಸಗಿ ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳ ಮೂಲಕ ಸರ್ದಾರ್‌ಶಹರ್‌ನ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಲ್ಲಿ ಮಕ್ಕಳು ಕೂಡ ಇದ್ದು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಮಿನಿ ಬಸ್ಗೆ ಮತ್ತೊಂದು ಬಸ್ ಡಿಕ್ಕಿ ಇಬ್ಬರ ಸಾವು: ಮಿನಿ ಬಸ್ವೊಂದಕ್ಕೆ ಮತ್ತೊಂದು ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯ ಪಡ್ಲಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ21 ರಲ್ಲಿ ಇಂದು ಸಂಭವಿಸಿದೆ. ಬಂಡಿಕುಯಿಯಿಂದ ಮೆಹಂದಿಪುರ ಬಾಲಾಜಿಗೆ ತೆರಳುತ್ತಿದ್ದ ಬಸ್ಗೆ ಮತ್ತೊಂದು ಬಸ್ ಡಿಕ್ಕಿ ಹೊಡೆದಿದೆ ಎಂದು ಗಾಯಾಳು ಪ್ರಯಾಣಿಕರೊಬ್ಬರು ಹೇಳಿದ್ದಾರೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಅವರಲ್ಲಿ ಗಂಭೀರವಾಗಿ ಗಾಯಗೊಂಡಿರುವ 8 ಜನರನ್ನು ಜೈಪುರದ ಆಸ್ಪತ್ರೆಗೆ ಸಾಗಿಸಲಾಗಿದೆ. ಅದರಲ್ಲಿ ಮಮತಾ ಮತ್ತು ರಾಜೇಶ್ ಶರ್ಮಾ ಎಂಬುವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ವೈದ್ಯ ಡಾ. ಶರ್ಮಾ ಹೇಳಿದ್ದಾರೆ. ಸದ್ಯ ಮೃತರ ಶವಗಳನ್ನು ದೌಸಾ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ .
24 ಗಂಟೆಗಳಲ್ಲಿ ಅಪಘಾತಗಳಲ್ಲಿ 13 ಜನ ಸಾವು: ಕಳೆದ 24 ಗಂಟೆಯಲ್ಲಿ ರಾಜಸ್ಥಾನದಲ್ಲಿ ಸಂಭವಿಸಿದ ಪ್ರತ್ಯೆಕ ಅಪಘಾತಗಳಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಬುಧವಾರ ಸಂಜೆ ನಾಗೌರ್ನ ಜಸ್ವಂತ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರು ಮತ್ತು ಎಸ್‌ಯುವಿ ವಾಹನದ ನಡುವೆ ಡಿಕ್ಕಿ ಸಂಭವಿಸಿ ಒರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ರವೀಂದ್ರ ಕುಮಾರ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು: ಶಾಲಾ ಮಕ್ಕಳ ಮೇಲೆ ಹರಿದ ಖಾಸಗಿ ಬಸ್.. ವಿದ್ಯಾರ್ಥಿನಿ ಸಾವು