ಬಿಜ್ನೋರ್ (ಉತ್ತರ ಪ್ರದೇಶ) : ಇಲ್ಲಿನ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಈ ದುರಂತದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ.
ಭಾರಿ ಸ್ಫೋಟದಿಂದಾಗಿ ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿ ಉರಿದಿದ್ದು, ಕೆಲಸ ಮಾಡುತ್ತಿದ್ದ ಐವರು ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು.
ಘಟನೆಯಲ್ಲಿ ಸಾವನ್ನಪ್ಪಿದ ಕಾರ್ಮಿಕರ ಮೃತದೇಹಗಳನ್ನ ಹೊರ ತೆಗೆದ ಸಿಬ್ಬಂದಿ, ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಿಜ್ನೋರ್ ಪೊಲೀಸ್ ಠಾಣೆಯ ಕೊಟ್ವಾಲಿ ಪಟ್ಟಣದ ಮೊಹಲ್ಲಾ ಬಕ್ಷಿವಾಲಾ ಎಂಬುವವರ ಮನೆಯಲ್ಲಿ ರಾಸಾಯನಿಕ ಕಾರ್ಖಾನೆಯಿಂದ ಪಟಾಕಿ ತಯಾರಿಸುವ ವ್ಯವಹಾರ ಇತ್ತು ಎನ್ನಲಾಗ್ತಿದೆ. ಸ್ಫೋಟ ಸಂಭವಿಸಿದ ರಾಸಾಯನಿಕ ಕಾರ್ಖಾನೆ ಯೂಸುಫ್ ಎಂಬ ವ್ಯಕ್ತಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ.
ಓದಿ : ರೈತನ ಮನೆಯಿಂದ 1.24 ಕೋಟಿ ರೂ. ಕಳ್ಳತನ ಮಾಡಿದ ದುಷ್ಕರ್ಮಿಗಳು
ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದರೆ, 2 ರಿಂದ 3 ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ಸುದ್ದಿಯನ್ನ ದಾರಿಹೋಕರು ಪೊಲೀಸರಿಗೆ ಮುಟ್ಟಿಸಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ ಡಾ. ಧರಮ್‌ವೀರ್ ಸಿಂಗ್, ರಾಸಾಯನಿಕ ಕಾರ್ಖಾನೆಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದರಿಂದ ಈ ಸ್ಫೋಟ ಸಂಭವಿಸಿದೆ ಎಂದಿದ್ದಾರೆ. ಇನ್ನೊಂದೆಡೆ ಕಾರ್ಖಾನೆಯ ಮಾಲೀಕ ಯೂಸುಫ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇಡೀ ಘಟನೆಯ ತನಿಖೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಹೇಳಿದ್ದಾರೆ.