ದುರ್ಗ್(ಛತ್ತೀಸ್ಗಢ): ಒಂದೇ ಕುಟುಂಬದ ಐವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಇಬ್ಬರು ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮತ್ತು ಇನ್ನು ಮೂವರು ಸುಟ್ಟ ಸ್ಥಿತಿಯಲ್ಲಿ ಶವಗಳಾಗಿ ಪತ್ತೆಯಾಗಿದ್ದಾರೆ.
ಛತ್ತೀಸ್ಗಢದ ದುರ್ಗ್ ಜಿಲ್ಲೆಯ ಪಟಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಥೇನಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಹಣಕಾಸಿನ ಪರಿಸ್ಥಿತಿ ತೀರಾ ಹದಗೆಟ್ಟ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರೈತ ರಾಮ್ ಬ್ರಿಜ್ ಗಾಯಕವಾಡ್(52), ಆತನ ಪತ್ನಿ ಜಾನಕಿ ಬಾಯಿ (47), ಮಗ ಸಂಜು (24) ಮತ್ತಿಬ್ಬರು ಹೆಣ್ಣುಮಕ್ಕಳಾದ ಜ್ಯೋತಿ (21), ದುರ್ಗಾ(28) ಮೃತಪಟ್ಟವರಾಗಿದ್ದಾರೆ.
ಇದನ್ನೂ ಓದಿ: ಸಾವಿರ ಕೋಟಿ ಸಾಲ ವಂಚನೆ: ಜಮ್ಮು ಕಾಶ್ಮೀರದಲ್ಲಿ ಎಸಿಬಿ ದಾಳಿ
ಮೊದಲಿಗೆ ತಂದೆ, ಮಗ ನೇಣುಬಿಗಿದುಕೊಂಡಿರುವ ದೃಶ್ಯ ಕಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಉಳಿದ ಮೂವರ ಮೃತದೇಹಗಳು ಪತ್ತೆಯಾದವು ಎಂದು ದುರ್ಗಾ ವಲಯದ ಐಜಿಪಿ ವಿವೇಕಾನಂದ್ ಸಿನ್ಹಾ ತಿಳಿಸಿದ್ದಾರೆ.
ಮಗನೊಂದಿಗೆ ಸೇರಿ ತಂದೆ ಮೊದಲು ಹೆಂಡತಿ ಮತ್ತು ಹೆಣ್ಣು ಮಕ್ಕಳನ್ನು ಕೊಂದಿದ್ದಾನೆ. ನಂತರ ಆ ಮೂರೂ ಶವಗಳನ್ನು ಭತ್ತದ ಹೊಟ್ಟಿನಲ್ಲಿಟ್ಟು, ಬೆಂಕಿ ಹಚ್ಚಿದ್ದಾನೆ. ನಂತರ ತಂದೆ ಮತ್ತು ಮಗ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಛತ್ತೀಸ್ಗಢ ಗೃಹ ಸಚಿವ ತಾಮ್ರಧ್ವಜ್ ಸಾಹು ಈ ಕುರಿತಂತೆ ತನಿಖೆ ನಡೆಸಲು ತಂಡವೊಂದನ್ನು ರಚಿಸಲು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.