ಕಲ್ಲಕುರಿಚಿ(ತಮಿಳುನಾಡು): ಪಟಾಕಿ ಮಳಿಗೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಅಗ್ನಿ ಅನಾಹುತ ಸಂಭವಿಸಿರುವ ಪರಿಣಾಮ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿ, 10 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕಲ್ಲಕುರಿಚಿ ಜಿಲ್ಲೆಯ ಶಂಕರಪುರಂ ಪಟ್ಟಣದ ಪಟಾಕಿ ಮಳಿಗೆಯಲ್ಲಿ ಈ ಅವಘಡ ಸಂಭವಿಸಿದೆ.
ಚೆನ್ನೈನಿಂದ ಸುಮಾರು 262 ಕಿಲೋ ಮೀಟರ್ ದೂರದ ಶಂಕರಪುರಂ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಸಂಜೆ ಅಗ್ನಿ ಅವಘಡ ನಡೆದಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚಿನ ಪಟಾಕಿ ದಾಸ್ತಾನು ಮಾಡಿ, ಮಾರಾಟ ಮಾಡಲಾಗುತ್ತಿತು. ಈ ವೇಳೆ ಬೆಂಕಿ ಹೊತ್ತಿಕೊಂಡಿದೆ. ಪಕ್ಕದ ಬೇಕರಿ ಅಂಗಡಿಯಲ್ಲಿದ್ದ ನಾಲ್ಕು ಗ್ಯಾಸ್ ಸಿಲಿಂಡರ್ಗಳು ಸ್ಫೋಟಗೊಂಡಿದ್ದು, ಬೆಂಕಿ ಮತ್ತಷ್ಟು ದೂರ ವ್ಯಾಪಿಸಿದೆ.
ಘಟನೆಯಲ್ಲಿ ರಸ್ತೆ ಬದಿ ಹೂವಿನ ವ್ಯಾಪಾರ ಮಾಡ್ತಿದ್ದ ವ್ಯಕ್ತಿ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಪಟಾಕಿ ಅಂಗಡಿಯಲ್ಲಿ ಸಿಲುಕಿಕೊಂಡಿರುವ ಕೆಲವರ ರಕ್ಷಣೆ ಮಾಡಲಾಗಿದೆ. ಸ್ಥಳದಲ್ಲಿ ಎರಡು ಗಂಟೆಗಳ ಕಾಲ ಅಗ್ನಿಶಾಮಕ ದಳ ಕಾರ್ಯನಿರ್ವಹಿಸಿ, ಬೆಂಕಿ ನಂದಿಸಿವೆ. ಘಟನೆಯಲ್ಲಿ ಪಟಾಕಿ ಅಂಗಡಿ, ಬೇಕರಿ ಹಾಗೂ ಮೊಬೈಲ್ ಶಾಪ್ನ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಉದ್ಯೋಗಿಗಳನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯಲ್ಲಿ ಸಾವನ್ನಪ್ಪಿರುವ ವ್ಯಕ್ತಿಗಳ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಗಾಯಗೊಂಡಿರುವವರಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸಿಎಂ ಸ್ಟಾಲಿನ್ ತಿಳಿಸಿದ್ದಾರೆ.