ರಾಯಗಡ (ಒಡಿಶಾ): ರಾಯಗಡ ಜಿಲ್ಲೆಯ ಕಲ್ಯಾಣಸಿಂಗ್‌ಪುರ ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಮೋರಿಯ ಒಂದು ಭಾಗ ಇಂದು ಬೆಳಗ್ಗೆ ದಿಢೀರ್ ಕುಸಿದು ಬಿದ್ದಿದೆ. ಅವಘಡದಲ್ಲಿ ನಾಲ್ವರು ಮಕ್ಕಳು ಹಾಗೂ ಓರ್ವ ಪುರುಷ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ, ಮಕ್ಕಳು ಮೋರಿಯ ಕೆಳಗೆ ಸ್ನಾನ ಮಾಡುತ್ತಿದ್ದಾಗ ದುರ್ಘಟನೆ ನಡೆದಿದೆ. ಮೃತರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ನಿರ್ಮಾಣ ಹಂತದಲ್ಲಿರುವ ಮೋರಿಯ ಕೆಳಗೆ ಶೇಖರಣೆಯಾದ ಮಳೆ ನೀರಿನಲ್ಲಿ ಕೆಲವರು ಸ್ನಾನ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಮೋರಿ ಕುಸಿದಿದೆ. ಮೋರಿಯ ಕೆಳಗಿದ್ದವರು ಅವಶೇಷಗಳ ಅಡಿಯಲ್ಲಿ ಸಿಲುಕಿ ಸಾವನಪ್ಪಿದ್ದಾರೆ ಎನ್ನಲಾಗಿದೆ.
ಮೋರಿ ಕುಸಿದಾಗ ಎಷ್ಟು ಮಂದಿ ಸ್ನಾನ ಮಾಡುತ್ತಿದ್ದರು ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಅಗ್ನಿಶಾಮಕ ದಳ ಮತ್ತು ಪೊಲೀಸರನ್ನು ಒಳಗೊಂಡ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: Blast in Pakistan: ರಾಜಕೀಯ ಪಕ್ಷದ ಸಮಾವೇಶದಲ್ಲಿ ಪ್ರಬಲ ಬಾಂಬ್ ಸ್ಫೋಟ.. 40 ಜನ ಬಲಿ, 200 ಮಂದಿಗೆ ಗಾಯ
100 ವರ್ಷಗಳ ಹಳೆಯ ಕಟ್ಟಡ ಕುಸಿತ: ಇತ್ತೀಚೆಗೆ ಪಂಜಾಬ್ನ ಅಮೃತಸರದ ಸಮೀಪ ಕತ್ರಾ ಅಹ್ಲುವಾಲಿಯಾ ಎಂಬಲ್ಲಿ 100 ವರ್ಷದ ಹಳೆಯ ಕಟ್ಟಡವೊಂದು ಸಂಪೂರ್ಣ ಕುಸಿದು ಬಿದ್ದಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಕಟ್ಟಡದ ಕೆಳಗೆ ನಿಲ್ಲಿಸಿದ್ದ ವಾಹನಗಳು ಸಂಪೂರ್ಣ ಜಖಂ ಆಗಿದ್ದು, ರಸ್ತೆ ಕೂಡ ಬಂದ್ ಆಗಿತ್ತು. ಶಿಥಿಲಾವಸ್ಥೆಯಲ್ಲಿ ನಿಂತಿದ್ದ ಕಟ್ಟಡ ದುಃಸ್ಥಿತಿಯ ಕುರಿತು ಹಲವು ಬಾರಿ ಆಡಳಿತ ಮಂಡಳಿಗೆ ಮಾಹಿತಿ ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದರು.
ಇದನ್ನೂ ಓದಿ: ಕುಸಿತಗೊಂಡ 100 ವರ್ಷಗಳ ಹಳೆಯ ಕಟ್ಟಡ: ವಾಹನಗಳು ಜಖಂ
ಖಗಾರಿಯಾ ಸೇತುವೆ ಕುಸಿತ: ಬಿಹಾರ ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 10 ಸೇತುವೆಗಳು ಕುಸಿದಿದ್ದು, ಇತ್ತೀಚೆಗೆ ಖಗಾರಿಯಾದಲ್ಲಿನ ಎನ್‌ಎಚ್ 31 ರ ಬುಧಿ ಗಂಡಕ್ ನದಿಯ ಚತುಷ್ಪಥ ರಸ್ತೆಯಲ್ಲಿರುವ ಸೇತುವೆಯ ಒಂದು ಭಾಗವು ಹಾನಿಗೊಳಗಾಗಿತ್ತು. ಸೇತುವೆ ಹಾಳಾಗಿರುವ ಬಗ್ಗೆ ಸ್ಥಳೀಯರು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ಪ್ರಾಧಿಕಾರದ ಸಿಬ್ಬಂದಿ ಸ್ಥಳಕ್ಕೆ ತಲುಪಿ ಸೇತುವೆಯನ್ನು ಪರಿಶೀಲಿಸಿದ್ದರು.
ಬಿಹಾರದಲ್ಲಿ ನದಿ ಸೇತುವೆಗೆ ಹಾನಿಯಾದ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮುನ್ನ ರಾಜ್ಯದಲ್ಲಿ ಹಲವು ಸೇತುವೆಗಳು ನೆಲಸಮವಾಗಿವೆ. ಜೂನ್ 4ರಂದು ಭಾಗಲ್ಪುರ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿದ್ದ ಆಗುವನಿ ಘಾಟ್ ಸೇತುವೆ ಕುಸಿದಿತ್ತು. ಕಳೆದ ವರ್ಷವೂ ಈ ಸೇತುವೆ ನಿರ್ಮಾಣದ ವೇಳೆ ಹಾನಿಗೊಳಗಾಗಿತ್ತು.
ಇದನ್ನೂ ಓದಿ: ಖಗಾರಿಯಾ ಸೇತುವೆ ಕುಸಿತ.. ಎನ್ಹೆಚ್ಎಐ ಅಧಿಕಾರಿಗಳಿಂದ ಪರಿಶೀಲನೆ