ಸರನ್, ಬಿಹಾರ: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಶ್ರಕ್‌ನ ಕರ್ನ್ ಕುಡಾರಿಯಾ ಗ್ರಾಮದಲ್ಲಿ ಸ್ಕಾರ್ಪಿಯೋ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ. ಈ ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಯುವಕನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
15 ಅಡಿ ಆಳದ ಕಾಲುವೆಗೆ ಬಿದ್ದ ಸ್ಕಾರ್ಪಿಯೋ: ಮಶ್ರಕ್ ಪೊಲೀಸ್ ಠಾಣೆ ವ್ಯಾಪ್ತಿಯ ಚಾಲಿಸ್ ಆರ್ಡಿ ಕಾಲುವೆ ಬಳಿ ಈ ಅಪಘಾತ ಸಂಭವಿಸಿದೆ. ಗೋಪಾಲ್‌ಗಂಜ್ ಜಿಲ್ಲೆಯ ಬೈಕುತಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬದ ಜನರು ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿವಾನ್‌ನ ಬಸಂತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಘಿ ಗ್ರಾಮಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ. ಗುರುವಾರ ತಡರಾತ್ರಿ ಎಲ್ಲರೂ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಗೋಪಾಲಗಂಜ್‌ಗೆ ತೆರಳುತ್ತಿದ್ದರು. ಆದರೆ, ಈ ವೇಳೆ ಸ್ಕಾರ್ಪಿಯೋ 15 ಅಡಿ ಆಳದ ಕಾಲುವೆಗೆ ಉರುಳಿ ಬಿದ್ದಿದೆ.
ರಸ್ತೆ ಅಪಘಾತದಲ್ಲಿ ಐವರ ಸಾವು: ಅಪಘಾತದ ವೇಳೆ ಕಾರಿನಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿ ಐವರು ಸಾವನ್ನಪ್ಪಿದ್ದು, ಯುವಕನೊಬ್ಬ ಹೇಗೋ ಕಾರಿನಿಂದ ಇಳಿದು ತನ್ನ ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಸ್ಥಳದಲ್ಲೇ ಜಮಾಯಿಸಿ ಸ್ಥಳೀಯ ಡೈವರ್‌ಗಳ ಸಹಾಯದಿಂದ ಕಾರಿನಲ್ಲಿ ಸಿಲುಕಿದ್ದವರನ್ನು ಹೊರ ತೆಗೆದರು. ಆದರೆ ಯಾರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬಳಿಕ ಈ ಮಾಹಿತಿ ಪೊಲೀಸರಿಗೆ ತಿಳಿಸಿದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು: ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಕೈಗೊಂಡರು. ಬಳಿಕ ಎಲ್ಲಾ ಐದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಿದರು. ಮೃತರ ಸಂಬಂಧಿಕರಿಗೆ ಮಾಹಿತಿ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಐವರು ಸ್ಥಳದಲ್ಲಿ ಸಾವನ್ನಪ್ಪಿದ್ದು, ಓರ್ವನಿಗೆ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಾಘಿ ಗ್ರಾಮದ ಉಪಾಧ್ಯಕ್ಷ ರೋಹಿತ್ ಗುಪ್ತಾ ಹೇಳಿದ್ದಾರೆ.
ಓದಿ: ನೇಪಾಳದಲ್ಲಿ ಬಸ್ ಅಪಘಾತ: ಭಾರತದ 6 ಯಾತ್ರಿಕರು ಸಾವು
ಟ್ರ್ಯಾಕ್ಟರ್ ನದಿಗೆ ಬಿದ್ದು 9 ಮಂದಿ ದಾರುಣ ಸಾವು: ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯ ಕೊತ್ವಾಲಿ ದೇಹತ್ ಪ್ರದೇಶದಲ್ಲಿ ಬುಧವಾರ ಭೀಕರ ಅಪಘಾತ ಸಂಭವಿಸಿದೆ. ಬಂಡ್ಕಿ ಗ್ರಾಮದ ಬಳಿ ಧಮೋಲಾ ನದಿಗೆ ಟ್ರ್ಯಾಕ್ಟರ್ ಪಲ್ಟಿಯಾಗಿ 9 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಟ್ರಾಲಿಯಲ್ಲಿ 50ಕ್ಕೂ ಹೆಚ್ಚು ಭಕ್ತರಿದ್ದರು. ಮೃತ ದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಇದೇ ವೇಳೆ, ಸರ್ಕಾರ ಮೃತ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.