ಶಿಮ್ಲಾ (ಹಿಮಾಚಲ ಪ್ರದೇಶ): ದೇಶದ ಮೊದಲ ಮತದಾರ ಮಾಸ್ಟರ್ ಶ್ಯಾಮ್ ಸರನ್ ನೇಗಿ ಇಂದು ವಿಧಿವಶರಾಗಿದ್ದಾರೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಕಲ್ಪಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ನೇಗಿ ಅವರು ತುಂಬಾ ಸಕ್ರಿಯರಾಗಿದ್ದರು. ಜುಲೈ 1, 1917 ರಂದು ಜನಿಸಿದ ಶ್ಯಾಮ್ ಸರನ್ (105) ಅವರು 1952 ರಿಂದ ಪ್ರತಿ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಮತವನ್ನು ಚಲಾಯಿಸಿದ್ದರು.
ಭಾರತ ಸ್ವತಂತ್ರಗೊಂಡ ನಂತರ ಮೊದಲ ಸಾರ್ವತ್ರಿಕ ಚುನಾವಣೆ 1952 ರಲ್ಲಿ ನಡೆಯಿತು. ಆದ್ರೆ, ಹಿಮಾಚಲ ಪ್ರದೇಶದ ಬುಡಕಟ್ಟು ಪ್ರದೇಶಗಳಲ್ಲಿ ಉಂಟಾಗುತ್ತಿದ್ದ ಭಾರಿ ಹಿಮಪಾತದಿಂದಾಗಿ ರಾಜ್ಯದಲ್ಲಿ ಐದು ತಿಂಗಳ ಹಿಂದೆಯೇ ಅಕ್ಟೋಬರ್ 1951 ರಲ್ಲಿ ಮತದಾನ ನಡೆಸಲಾಯಿತು. ಮಾಹಿತಿ ಪ್ರಕಾರ, 1951ರ ಅಕ್ಟೋಬರ್ 25 ರಂದು ಮೊದಲ ಬಾರಿಗೆ ಮತದಾನ ಮಾಡಿದ ದೇಶದ ಮೊದಲ ಮತದಾರ ಎಂದೇ ಎಸ್ ಎಸ್ ನೇಗಿ ಪ್ರಖ್ಯಾತರಾಗಿದ್ದಾರೆ. 1952ರಿಂದ ನಡೆದ ಪ್ರತಿ ಲೋಕಸಭಾ ಚುನಾವಣೆ, ಅಸೆಂಬ್ಲಿ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ತಮ್ಮ ಹಕ್ಕನ್ನು ಮಿಸ್ ಮಾಡದೇ ಚಲಾಯಿಸುತ್ತಾ ಬರುವ ಮೂಲಕ ಯುವ ಜನತೆಗೆ ಮಾದರಿಯಾಗಿದ್ದರು.
ಇದನ್ನೂ ಓದಿ: ದೇಶದ ಮೊದಲ ಮತದಾರ: 105ನೇ ವಯಸ್ಸಿನಲ್ಲೂ ತಮ್ಮ ಮತ ಹಕ್ಕು ಚಲಾಯಿಸಿದ ಮಾಸ್ಟರ್ ನೇಗಿ
ಕೊನೆಯ ಬಾರಿಗೆ ಮಾಸ್ಟರ್ ನೇಗಿ ಅವರು ಇತ್ತೀಚೆಗೆ ನಡೆದ ಹಿಮಾಚಲ ಚುನಾವಣೆಯಲ್ಲಿ ನವೆಂಬರ್ 2, 2022 ರಂದು ತಮ್ಮ ಹಕ್ಕು ಚಲಾಯಿಸಿದ್ದರು. ಇದೇ ಅವರ ಕೊನೆಯ ಮತದಾನ. ಭಾರತೀಯ ಚುನಾವಣಾ ಆಯೋಗ (ಇಸಿಐ) ತೆಗೆದುಕೊಂಡ ಉಪಕ್ರಮದ ಬಳಿಕ ನೇಗಿ ಅವರನ್ನು ಸ್ವತಂತ್ರ ಭಾರತದ ಮೊದಲ ಮತದಾರ ಎಂದು 2007ರಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ಮೂರು ವರ್ಷಗಳ ನಂತರ ಜೂನ್ 2010 ರಲ್ಲಿ ಅಂದಿನ ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರು ಕಲ್ಪಾದಲ್ಲಿ ನಡೆದ ಸಭೆಯಲ್ಲಿ ನೇಗಿ ಅವರನ್ನು ದೇಶದ ಮೊದಲ ಮತದಾರ ಎಂದು ಅಭಿನಂದಿಸಿದ್ದರು.
ಇದನ್ನೂ ಓದಿ: ಸ್ವತಂತ್ರ ಭಾರತದ ಮೊದಲ ಮತದಾರನಿಗೆ 102 ವರ್ಷ: ಮತ್ತೆ ಮತ ಚಲಾಯಿಸಲಿದ್ದಾರೆ ನೇಗಿ