ಚಮೋಲಿ(ಉತ್ತರಾಖಂಡ): ಡಿಜಿಟಲ್ ಕ್ರಾಂತಿಯಿಂದಾಗಿ ಇಡೀ ವಿಶ್ವವೇ ಬೆಸೆದುಕೊಂಡಿದೆ. ಆದರೆ, ಇಲ್ಲೊಂದು ಹಳ್ಳಿಯಲ್ಲಿ ಮೊದಲ ಬಾರಿಗೆ ಮೊಬೈಲ್ ರಿಂಗಣಿಸಿದೆ ಅಂದರೆ ಅಚ್ಚರಿಯ ಸಂಗತಿಯೇ. ಆ ಗ್ರಾಮ ಇರುವುದು ಉತ್ತರಾಖಂಡದ ದುರ್ಗಮ ಪ್ರದೇಶದಲ್ಲಿ. ಹೆಸರು ಪಿನೌ ಗಾಂವ್.
ಇದು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಂಗರಕ್ಷಕರಾಗಿದ್ದ ದೇವ್ಸಿಂಗ್ ದಾನು ಅವರ ಹುಟ್ಟೂರು. 21ನೇ ಶತಮಾನದವರೆಗೂ ಈ ಗ್ರಾಮಕ್ಕೆ ಡಿಜಿಟಲ್ ಕ್ರಾಂತಿ ಕಾಲಿಟ್ಟಿರಲಿಲ್ಲ ಎಂಬುದೇ ಅಚ್ಚರಿಯ ವಿಷಯ. ದುರ್ಗಮ ಪ್ರದೇಶದಲ್ಲಿರುವ ಈ ಹಳ್ಳಿಗೆ ಕೊನೆಗೂ 'ನೆಟ್ವರ್ಕ್' ಸೇವೆ ವಿಸ್ತರಿಸಿದೆ. ಉತ್ತರಾಖಂಡ ಚಮೋಲಿ ಜಿಲ್ಲೆಯ ದೇವಾಲ್ ಡೆವಲಪ್‌ಮೆಂಟ್ ಬ್ಲಾಕ್‌ನ ಪಿನೌ ಗಾಂವ್ ಗ್ರಾಮದಲ್ಲಿ ಮೊದಲ ಬಾರಿಗೆ ಸಂಪರ್ಕ ಸೇವೆ ಆರಂಭಗೊಂಡಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಸಂವಹನ ಸೇವೆ ನೀಡಿದ ಜಿಯೋ: ಶತಮಾನಗಳಿಂದಲೂ ಸಂವಹನ ಸಂಪರ್ಕದಿಂದ ವಂಚಿತವಾಗಿದ್ದ ಈ ಕುಗ್ರಾಮಕ್ಕೆ ಭಾರತದ ಅತಿದೊಡ್ಡ ನೆಟ್ವರ್ಕ್ ಆಗಿ ಬೆಳೆಯುತ್ತಿರುವ 'ಜಿಯೋ ರಿಲಯನ್ಸ್' ನೆಟ್ವರ್ಕ್ ಸೇವೆ ಪ್ರಾರಂಭಿಸಿದೆ. ಈ ಗ್ರಾಮದಲ್ಲಿ 20 ಕುಟುಂಬಗಳ 80 ಜನರು ವಾಸಿಸುತ್ತಿದ್ದಾರೆ. ರಸ್ತೆ, ಶಾಲೆಗಳಂತಹ ಮೂಲಸೌಕರ್ಯಗಳ ಕೊರತೆಯಿದ್ದರೂ ಇಲ್ಲಿನ ಜನರು ಮಾತ್ರ ಗುಳೆ ಹೋಗಿರಲಿಲ್ಲ. ಒಂದಲ್ಲ ಒಂದು ದಿನ ಗ್ರಾಮಕ್ಕೆ ಸೌಕರ್ಯಗಳು ದೊರೆಯುತ್ತವೆ ಎಂದು ಚಾತಕ ಪಕ್ಷಿಯಂತೆ ಕಾದಿದ್ದರು. ಇದೀಗ ಸಂವಹನ ಸಾಧಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಗ್ರಾಮಕ್ಕೆ ಮೊಬೈಲ್ ಸಂಪರ್ಕ ಕಲ್ಪಿಸಿದ ದೇವಳ ಬ್ಲಾಕ್ ಮುಖ್ಯಸ್ಥ ದರ್ಶನ್ ದಾನು ಅವರಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ. ಇಂದಿಗೂ ಪಿನೌ ಗಾಂವ್ ಗ್ರಾಮಕ್ಕೆ ತಲುಪಲು ಅಲ್ಲಿನ ಜನರು 6 ಕಿ.ಮೀ ದೂರ ನಡೆದುಕೊಂಡೇ ಸಾಗಬೇಕಿದೆ. ಶೀಘ್ರದಲ್ಲೇ ರಸ್ತೆ ಸಂಪರ್ಕ ಕಲ್ಪಿಸಲಾಗುವುದು ಅಲ್ಲಿನ ಜನಪ್ರತಿನಿಧಿಗಳು ತಿಳಿಸಿದ್ದಾರೆ.
ನೇತಾಜಿಯ ಅಂಗರಕ್ಷಕನ ಊರು: ಅಜಾದ್ ಹಿಂದ್ ಫೌಜ್ ಸೇನಾ ತುಕಡಿಯ 2 ಬೆಟಾಲಿಯನ್ಗಳು ಇಲ್ಲಿ ಕೆಲಸ ಮಾಡುತ್ತಿದ್ದವು. ಇವುಗಳನ್ನು ಮುನ್ನಡೆಸಲು ಕಮಾಂಡರ್ಗಳಾಗಿ ಉತ್ತರಾಖಂಡಕ್ಕೆ ಸೇರಿದ ಮೂವರನ್ನು ಸುಭಾಷ್ಚಂದ್ರ ಬೋಸ್ ನೇಮಕ ಮಾಡಿದ್ದರು. ಅದರಲ್ಲಿ ಕರ್ನಲ್ ಚಂದ್ರ ಸಿಂಗ್ ನೇಗಿ, ಕರ್ನಲ್ ಬುಧಿ ಸಿಂಗ್ ರಾವತ್ ಮತ್ತು ಕರ್ನಲ್ ಪಿತೃಶರನ್ ರಟೂರಿಗೆ ಜವಾಬ್ದಾರಿಯನ್ನು ವಹಿಸಲಾಗಿತ್ತು. ಅಲ್ಲದೇ ದೇವ್ ಸಿಂಗ್ ದಾನು ಎಂಬುವರನ್ನು ನೇತಾಜಿ ಅವರ ಅಂಗರಕ್ಷಕರನ್ನಾಗಿ ನೇಮಕ ಮಾಡಲಾಗಿತ್ತು. ದೇವ್ ಸಿಂಗ್ ದಾನು ಪಿನೌನ್ ಗ್ರಾಮದವರಾಗಿದ್ದರು.
ಇದನ್ನೂ ಓದಿ: ಮೊದಲ ರಾತ್ರಿಯೇ ಅತ್ಯಾಚಾರ ನಡೆದ ಮಾಹಿತಿ ಬಿಚ್ಚಿಟ್ಟ ವಧು: ವರ ಮಾಡಿದ್ದೇನು?