ಜೈಪುರ: ಜೈಪುರದ ಸವಾಯಿ ಮಾನ್ಸಿಂಗ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನಲ್ಲಿ ಮೊದಲ ಸ್ಕಿನ್ ಬ್ಯಾಂಕ್ ತೆರೆಯಲಾಗಿದ್ದು, ಈ ಸ್ಕಿನ್ ಬ್ಯಾಂಕ್ನಿಂದ ಮೊದಲ ಚರ್ಮದಾನವನ್ನು ಮಾಡಲಾಗಿದೆ. ಜೈಪುರದ ವೈಶಾಲಿ ನಗರದ ನಿವಾಸಿ 50 ವರ್ಷದ ಅನಿತಾ ಗೋಯಲ್ ಅವರ ಸಂಬಂಧಿಕರು ಸೋಮವಾರ ಅನಿತಾ ಅವರ ಚರ್ಮವನ್ನು ದಾನ ಮಾಡಿದ್ದಾರೆ.
ಎಸ್‌ಎಂಎಸ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ 5 ವೈದ್ಯರು ಚರ್ಮದಾನಕ್ಕೆ ಸಂಬಂಧಿಸಿದ ಸಂಪೂರ್ಣ ಪ್ರಕ್ರಿಯೆ ನಡೆಸಿ ಈಗ ಚರ್ಮವನ್ನು ಸ್ಕಿನ್ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿ ಇರಿಸಿದ್ದಾರೆ.
ವೈಶಾಲಿ ನಗರದ ನಿವಾಸಿ ಅನಿತಾ ಗೋಯಲ್ ಅವರು ಬ್ರೈನ್ ಡೆಡ್ನಿಂದ ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ನಿದನರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಯ ವೈದ್ಯರ ಪ್ರಯತ್ನದ ನಂತರ ಮೃತಳ ಚರ್ಮದಾನ ಮಾಡಲು ಸಂಬಂಧಿಕರು ಒಪ್ಪಿಗೆ ಸೂಚಿಸಿದ್ದಾರೆ. ಹಾಗಾಗಿ ಎಸ್‌ಎಂಎಸ್ ಆಸ್ಪತ್ರೆಯ ಐವರು ವೈದ್ಯರ ತಂಡ ಖಾಸಗಿ ಆಸ್ಪತ್ರೆಗೆ ಆಗಮಿಸಿ ರಾಜ್ಯದಲ್ಲಿಯೇ ಮೊದಲ ಶವದ ಚರ್ಮದಾನ ಮಾಡಲಾಗಿದೆ ಎಂದು ಸವಾಯಿ ಮಾನ್ಸಿಂಗ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ರಾಕೇಶ್ ಜೈನ್ ತಿಳಿಸಿದ್ದಾರೆ.
ಅಪಘಾತಗಳ ಸಮಯದಲ್ಲಿ ರೋಗಿಯ ದೇಹವು 40 ರಿಂದ 50 ಪ್ರತಿಶತದಷ್ಟು ಹಾನಿಗೆಗೊಳಗಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರೋಗಿಯ ದೇಹದಿಂದ ಪ್ರೋಟೀನ್ ನಷ್ಟ ಮತ್ತು ಎಲೆಕ್ಟ್ರೋಲೈಟ್ ದ್ರವದ ಕೊರತೆ ಉಂಟಾಗುತ್ತದೆ. ಈ ಕಾರಣದಿಂದಾಗಿ ನಿಧಾನವಾಗಿ ಗಾಯದ ಸೋಂಕು ರೋಗಿಯ ದೇಹದಲ್ಲಿ ಹರಡಲು ಪ್ರಾರಂಭಿಸುತ್ತದೆ ಮತ್ತು ಹೆಚ್ಚಿನ ರೋಗಿಗಳು ಈ ಸೋಂಕಿನಿಂದ ಸಾಯುತ್ತಾರೆ. ಆದರೆ, ಈಗ ಅಂತಹ ರೋಗಿಗಳಿಗೆ ಸ್ಕಿನ್ ಬ್ಯಾಂಕ್ ಮೂಲಕ ಚರ್ಮ ಲಭ್ಯವಾಗುವಂತೆ ಮಾಡಿ ಅವರನ್ನು ಉಳಿಸಿಕೊಳ್ಳಬಹುದು ಎಂದು ಡಾ.ರಾಕೇಶ್ ಜೈನ್ ಹೇಳಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ 11% ಕೋವಿಡ್ ಸೋಂಕಿತರಿಗೆ ಶ್ವಾಸಕೋಶದ ಸಮಸ್ಯೆ