ನವದೆಹಲಿ: ಭಾರತೀಯ ವಾಯುಸೇನೆ ಓರಿಯನ್ ಸಮರಾಭ್ಯಾಸ ನಡೆಸಲು ಶುಕ್ರವಾರ ಫ್ರಾನ್ಸ್ ಪ್ರವಾಸ ಕೈಗೊಳ್ಳಲಿದೆ. ಫ್ರಾನ್ಸ್ನ ದೇಶದ ಫ್ರೆಂಚ್ ವಾಯು ಮತ್ತು ಬಾಹ್ಯಾಕಾಶ ಸೇನಾ (ಎಫ್‌ಎಎಸ್‌ಎಫ್) ನೆಲೆಯಾದ ಮಾಂಟ್-ಡಿ-ಮಾರ್ಸನ್ ಭಾರತೀಯ ವಾಯುಸೇನಾ ತುಕಡಿ ಪ್ರಯಾಣ ಬೆಳೆಸಲಿದೆ. ಈ ಸಮರಾಭ್ಯಾಸವು ಎಪ್ರಿಲ್ 17ರಿಂದ ಪ್ರಾರಂಭಗೊಂಡು ಮೇ 5ರವರೆಗೆ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಭಾರತೀಯ ವಾಯುಸೇನಾ ತುಕಡಿಯ ಸಮರಾಭ್ಯಾಸದಲ್ಲಿ ನಾಲ್ಕು ರಫೇಲ್ ಯುದ್ಧ ವಿಮಾನಗಳು, ಎರಡು ಸಿ-17 ವಿಮಾನ, ಎರಡು ll-78 ವಿಮಾನ ಮತ್ತು 165 ವಾಯುಸೇನೆ ಯೋಧರು ಪಾಲ್ಗೊಳ್ಳಲಿದ್ದಾರೆ. ಭಾರತೀಯ ವಾಯುಸೇನೆಯ ರಫೇಲ್ ಯುದ್ಧ ವಿಮಾನಕ್ಕೆ ಇದು ಮೊದಲ ಅಂತಾರಾಷ್ಟ್ರೀಯ ಸಮರಾಭ್ಯಾಸವಾಗಿದೆ.
ಇನ್ನು, ಭಾರತೀಯ ವಾಯುಸೇನೆ ಮತ್ತು ಫ್ರಾನ್ಸ್ನ ವಾಯಸೇನೆಯ ಜೊತೆಗೆ, ಇತರೆ ದೇಶಗಳ ವಾಯುಸೇನೆಗಳು ಸಮರಾಭ್ಯಾಸದಲ್ಲಿ ಭಾಗವಹಿಸಲಿದೆ. ಜರ್ಮನಿ, ಗ್ರೀಸ್, ಇಟಲಿ, ನೆದರ್ಲ್ಯಾಂಡ್ಸ್, ಯುಕೆ, ಸ್ಪೇನ್ ಮತ್ತು ಅಮೇರಿಕಾದ ವಾಯುಸೇನಾ ಪಡೆಗಳು ಕೂಡ ಈ ತಾಲೀಮಿನಲ್ಲಿ ಇರಲಿವೆ."ಈ ಸಮರಾಭ್ಯಾಸದಲ್ಲಿ ಭಾಗವಹಿಸುವಿಕೆಯು ಇತರ ವಾಯುಪಡೆಗಳಿಂದ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಭಾರತೀಯ ವಾಯುಪಡೆಯನ್ನು ಇನ್ನಷ್ಟು ಉತ್ಕೃಷ್ಟಗೊಳಿಸಲು ಸಹಕರಿಸುತ್ತದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಭಾರತೀಯ ವಾಯಸೇನೆಯ ರಫೇಲ್ ಯುದ್ಧ ವಿಮಾನಗಳು ಭಾರತದೊಳಗೆ ಜೋಧ್‌ಪುರದಲ್ಲಿ ನಡೆದ ಸಮರಾಭ್ಯಾಸದಲ್ಲಿ ಫ್ರೆಂಚ್ ವಾಯುಪಡೆಯೊಂದಿಗೆ ಭಾಗವಹಿಸಿದ್ದವು. ಈ ತಾಲೀಮಿಗೆ ಡೆಸರ್ಟ್ ನೈಟ್ ಎಂಬ ಕೋಡ್ ನೇಮ್ ನೀಡಲಾಗಿತ್ತು. ಫ್ರೆಂಚ್ ವಾಯುಪಡೆ ತನ್ನ ನ್ಯಾಟೋ(NATO) ಮತ್ತು ಇತರ ಮಿತ್ರರಾಷ್ಟ್ರಗಳೊಂದಿಗೆ ರಫೇಲ್ ಮತ್ತು ಮಿರಾಜ್-2000 ವಿಮಾನಗಳೊಂದಿಗೆ ಸಮರಾಭ್ಯಾಸದಲ್ಲಿ ಭಾಗವಹಿಸುತ್ತದೆ.
ಓರಿಯನ್ ಸಮರಾಭ್ಯಾಸವು, ಫ್ರಾನ್ಸ್ನ ರಕ್ಷಣಾ ಪಡೆಗಳು ನಡೆಸುವ ಅತಿದೊಡ್ಡ ಬಹುರಾಷ್ಟ್ರೀಯ ವಾಯುಸೇನಾ ತಾಲೀಮಾಗಿದೆ. ಇದು ಪ್ರಾನ್ಸ್ನ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಜೊತೆಗೆ ಅವರ ಮಿತ್ರರಾಷ್ಟ್ರಗಳಾದ ಯುಎಸ್ ಮತ್ತು ಯುಕೆಯನ್ನು ಒಳಗೊಂಡಿರುತ್ತದೆ. ಸುಮಾರು 7,000 ಕ್ಕೂ ಹೆಚ್ಚು ನ್ಯಾಟೋ ಪಡೆಗಳು, ನ್ಯಾಟೋ ಮಿತ್ರರಾಷ್ಟ್ರಗಳ ಸೇನಾ ಪಡೆಗಳು ತಾಲೀಮಿನಲ್ಲಿ ಭಾಗವಹಿಸಿವೆ ವರದಿಯಾಗಿದೆ. ರಫೇಲ್ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ಇತ್ತೀಚಿನ ಯುದ್ಧವಿಮಾನಗಳಾಗಿವೆ . ಇದು ಇಡೀ ಏಷ್ಯಾದಲ್ಲೇ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳು ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ : ರಫೇಲ್ ಹಗರಣ ಆರೋಪ: ತನಿಖೆಗೆ ಸಮಿತಿ ರಚಿಸಿದ ಫ್ರಾನ್ಸ್!