ಶಹೀದ್ ಭಗತ್ ಸಿಂಗ್ ನಗರ(ಪಂಜಾಬ್) : ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಭಗವಂತ್ ಮಾನ್ ಅವರಿಗೆ ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಪ್ರಮಾಣ ವಚನದ ಅದ್ಧೂರಿ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭಕ್ಕೆ ಬಹುತೇಕ ಪುರುಷರು ಹಳದಿ ಪೇಟಗಳನ್ನು ಮತ್ತು ಮಹಿಳೆಯರು ಹಳದಿ ದುಪಟ್ಟಾಗಳನ್ನು ಧರಿಸಿ ಬಂದಿದ್ದರು.
ಈ ಸಮಾರಂಭದಲ್ಲಿ ಭಗತ್ ಸಿಂಗ್ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿದ ಭಗವಂತ್ ಮಾನ್, ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಅಹಂ ಬೇಡ ಎಂದು ನಾನು ಮನವಿ ಮಾಡುತ್ತೇನೆ. ನಮಗೆ ಮತ ಹಾಕದವರನ್ನೂ ನಾವು ಗೌರವಿಸಬೇಕು. ನಾನು ಎಲ್ಲರಿಗೂ ಮತ್ತು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ಸಮಾರಂಭದಲ್ಲಿ ಆಪ್ ಮುಖ್ಯಸ್ಥ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ಇದನ್ನೂ ಓದಿ: ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ಕೇವಲ ಮುಸ್ಲಿಂ ಸಮುದಾಯದ ಅಧ್ಯಕ್ಷರ ನೇಮಕ ಪ್ರಶ್ನಿಸಿ ಅರ್ಜಿ: ಸುಪ್ರೀಂ ನೋಟಿಸ್