ಬಿಜಾಪುರ (ಛತ್ತೀಸ್ಗಢ): ಸುಕ್ಮಾ ಜಿಲ್ಲೆಯ ಸಿಲ್ಗರ್‌ನಲ್ಲಿ ಪೊಲೀಸ್ ಕ್ಯಾಂಪ್ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಪೊಲೀಸ್ ಕ್ಯಾಂಪ್ ಸ್ಥಾಪಿಸುವುದರ ವಿರುದ್ಧ 2 ದಿನಗಳಿಂದ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸೋಮವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೂರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪೊಲೀಸ್ ಕ್ಯಾಂಪ್ ಮೇಲೆ ನಕ್ಸಲರು ದಾಳಿ ಮಾಡಿದ್ದಾರೆ ಎಂದು ಬಸ್ತಾರ್ ಐಜಿ ಸುಂದರರಾಜ್ ಪಿ. ತಿಳಿಸಿದ್ದಾರೆ. ಸಿಲ್ಗರ್‌ನಲ್ಲಿ ಪೊಲೀಸ್ ಕ್ಯಾಂಪ್ ಸ್ಥಾಪಿಸುವುದರಿಂದ ನಕ್ಸಲರಿಗೆ ಭಾರಿ ನಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ನಕ್ಸಲರು ಗ್ರಾಮಸ್ಥರ ಬೆಂಬಲದೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಲವು ನಕ್ಸಲರು ಸೋಮವಾರ ಶಿಬಿರದ ಮೇಲೆ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಸಿಆರ್ಪಿಎಫ್ ಯೋಧರು ಸಹ ಗುಂಡು ಹಾರಿಸಿದರು. ಈ ಗುಂಡಿನ ಚಕಮಕಿಯಲ್ಲಿ ಕೆಲವು ನಕ್ಸಲರು ಕೊಲ್ಲಲ್ಪಟ್ಟಿದ್ದಾರೆ ಎಂಬ ವರದಿಗಳಿವೆ. ಗುಂಡಿಗೆ ಬಲಿಯಾದವರು ಗ್ರಾಮಸ್ಥರಲ್ಲ, ನಕ್ಸಲರು ಹತರಾಗಿದ್ದಾರೆ ಎಂದು ಐಜಿ ಹೇಳಿದ್ದಾರೆ.
ಆದರೆ, ಗುಂಡಿನ ದಾಳಿಯಲ್ಲಿ ಗ್ರಾಮಸ್ಥರು ಸಾವನ್ನಪ್ಪಿದ್ದಾರೆಯೇ ಅಥವಾ ನಕ್ಸಲರು ಮೃತಪಟ್ಟಿದ್ದಾರೆಯೇ ಎಂಬುದರ ಬಗ್ಗೆ ಖಚಿತ ಮಾಹಿತಿ ತಿಳಿದುಬಂದಿಲ್ಲ.