ಭಾಗಲ್ಪುರ(ಬಿಹಾರ): ಭಾಗಲ್ಪುರದಲ್ಲಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಟ್ರಕ್ವೊಂದು ಸ್ಫೋಟಗೊಂಡಿದೆ. ಅಪಘಾತದಲ್ಲಿ ಚಾಲಕ ದಾರುಣವಾಗಿ ಸಾವನ್ನಪ್ಪಿದ್ದು, ಜಿಲ್ಲೆಯ ನವಗಚಿಯಾ ಉಪವಿಭಾಗದ ನಾರಾಯಣಪುರ ಪೆಟ್ರೋಲ್ ಪಂಪ್ ಬಳಿ ನಸುಕಿನ ಜಾವ 5.30 ಕ್ಕೆ ಈ ಘಟನೆ ನಡೆದಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ನಂತರ ಅದರ ತುಂಡುಗಳು 100 ಮೀಟರ್ ವ್ಯಾಪ್ತಿಯಲ್ಲಿ ಹಾರಿ ಬಿದ್ದಿವೆ. ಇದರಿಂದ ಹತ್ತಿರದಲ್ಲಿದ್ದ ಹೋಟೆಲ್ಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿದೆ. ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಭಾಗಲ್ಪುರ ಮತ್ತು ಖಗರಿಯಾದಿಂದ ತಲಾ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ಹತೋಟಿಗೆ ತರಲಾಗಿದೆ.
ಇನ್ನು, ಘಟನೆಯಲ್ಲಿ ಟ್ರಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅದರಲ್ಲಿದ್ದ ಚಾಲಕ ಸಜೀವ ದಹನವಾಗಿದ್ದಾನೆ. ಕುಟುಂಬಸ್ಥರು ಮೃತದೇಹವನ್ನು ಹೊರತೆಗೆಯಲು ಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಚೀನಿ ಉದ್ಯಮಿಗಳು ಭೇಟಿ ನೀಡುತ್ತಿದ್ದ ಕಾಬೂಲ್ ಹೋಟೆಲ್ ಮೇಲೆ ದಾಳಿ, ಮೂವರ ಹತ್ಯೆ
ಪೆಟ್ರೋಲ್ ಪಂಪ್ ಬಳಿ ಬಿದ್ದ ಬೆಂಕಿ ಕಿಡಿ: ಸಿಲಿಂಡರ್ ಸ್ಫೋಟಗೊಂಡ ಬಳಿಕ ಸಿಲಿಂಡರ್ನ ತುಂಡೊಂದು ಭಗವಾನ್ ಪೆಟ್ರೋಲ್ ಪಂಪ್ನ ನೀರಿನ ಟ್ಯಾಂಕ್ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಅನಾಹುತಕ್ಕೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ. ಸಿಲಿಂಡರ್ ಸ್ಫೋಟಗೊಂಡ ಸದ್ದು ಹಲವು ಕಿಲೋಮೀಟರ್ವರೆಗೂ ಕೇಳಿಸಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಬಸ್ ಟಯರ್ ಸ್ಫೋಟ: ಕಾಲು ಮುರಿದುಕೊಂಡ ಪ್ರಯಾಣಿಕ