ಜೆಮ್ಶೆಡ್ಪುರ/ರಾಂಚಿ: ಜೆಮ್ಶೆಡ್ಪುರದ ಪರ್ಸುದಿಹ್ ಪ್ರದೇಶದಲ್ಲಿ 'ಈಟಿವಿ ಭಾರತ' ಹೆಸರಿನಲ್ಲಿ ನಕಲಿ ಕಚೇರಿ ತೆರೆದಿದ್ದಕ್ಕಾಗಿ ವ್ಯಕ್ತಿಯೋರ್ವನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಂಗಡಿವೊಂದರ ಮುಂದೆ 'ಈಟಿವಿ ಭಾರತ' ನ ಬ್ಯಾನರ್ ಹಾಕಿಕೊಂಡಿದ್ದ ಈತನ ವಿರುದ್ಧ ಇದೀಗ ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಪರ್ಸುದಿಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ರಾಕೇಶ್ ಸಾಹು ಎಂಬಾತ 'ಈಟಿವಿ' ಬ್ಯಾನರ್ ಹಾಕಿಸಿಕೊಂಡಿದ್ದನು. ಇದರ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ 'ಈಟಿವಿ ಭಾರತ' ತಂಡ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನಲ್ಲಿರುವ 'ಈಟಿವಿ ಭಾರತ' ಮುಖ್ಯ ಕಚೇರಿಗೆ ಮಾಹಿತಿ ನೀಡಲಾಗಿತ್ತು. ಜೊತೆಗೆ ಜೆಮ್ಶೆಡ್ಪುರ ಪೊಲೀಸ್ ವರಿಷ್ಠಾಧಿಕಾರಿ ಎಂ ತಮಿಳ್ ವನನ್ ಅವರ ಗಮನಕ್ಕೆ ತರಲಾಗಿತ್ತು. ಇದರ ಬೆನ್ನಲ್ಲೇ ಆರೋಪಿ ವಿರುದ್ಧ ವಂಚನೆ ಹಾಗೂ ಹಕ್ಕುಸ್ವಾಮ್ಯ ಉಲ್ಲಂಘನೆ ಸೆಕ್ಷನ್ಗಳ ಅಡಿ ಎಫ್ಐಆರ್ ದಾಖಲು ಮಾಡಲಾಗಿದೆ.
ಪ್ರಕರಣ ದಾಖಲು ಮಾಡಿಕೊಳ್ಳುವ ಮುನ್ನ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ವ್ಯಕ್ತಿ 'ಈಟಿವಿ ಭಾರತ' ಬ್ಯಾನರ್ ತೆಗೆದು ಬೇರೆ ವಾಹಿನಿಯ ಬ್ಯಾನರ್ ಹಾಕಿರುವುದು ಸಹ ಬೆಳಕಿಗೆ ಬಂದಿದೆ.
ETV Bharat ಸಂಸ್ಥೆಯ ಕಳಕಳಿ: 'ಈಟಿವಿ ಭಾರತ' ದೇಶಾದ್ಯಂತ ತನ್ನದೇ ಬ್ಯೂರೋ ಕಚೇರಿಗಳನ್ನು ಹೊಂದಿದೆ. ದೇಶದ ಪ್ರತಿ ಜಿಲ್ಲೆಯಲ್ಲೂ ವರದಿಗಾರರಿದ್ದಾರೆ. ಅಂಗಡಿ, ಅಥವಾ ಇತರೆ ಸ್ಥಳಗಳಲ್ಲಿ ಪೋಸ್ಟರ್, ಬ್ಯಾನರ್ ಕಂಡು ಬಂದರೆ, ಅವುಗಳನ್ನು ನಂಬಬೇಡಿ ಎಂದು 'ಈಟಿವಿ ಭಾರತ' ಓದುಗರಲ್ಲಿ ವಿನಂತಿ ಮಾಡಿಕೊಳ್ಳುತ್ತದೆ. ಇಂತಹ ಯಾವುದೇ ಸ್ಪಷ್ಟೀಕರಣ ಅಥವಾ ಹೆಚ್ಚಿನ ಮಾಹಿತಿಗೋಸ್ಕರ 'ಈಟಿವಿ ಭಾರತ' ಬ್ಯೂರೋ ಕಚೇರಿ ಸಂಪರ್ಕಿಸಬಹುದು.