ಮುಂಬೈ: ಒಂದು ವರ್ಷದ ಹಿಂದೆ ಬಿಡುಗಡೆಯಾದ ಮಿರ್ಜಾಪುರ್ ವೆಬ್ ಸಿರೀಸ್ನ ನಿರ್ಮಾಪಕ ಹಾಗೂ ಆ ವೆಬ್ ಸಿರೀಸ್ ಪ್ರಸಾರ ಮಾಡುತ್ತಿರುವ ಅಮೆಜಾನ್ ಪ್ರೈಮ್ ವಿರುದ್ಧ ದೂರು ದಾಖಲಾಗಿದೆ.
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಜಿಲ್ಲೆಯಲ್ಲಿ ದೂರು ದಾಖಲಾಗಿದ್ದು, ಈ ವೆಬ್ ಸಿರೀಸ್ನಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಪ್ರಾದೇಶಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಇದರ ಜೊತೆಗೆ ಸಾಮಾಜಿಕ ಸಾಮರಸ್ಯದ ಕದಡುವ ಅಂಶಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರ ಜೊತೆಗೆ ಮಿರ್ಜಾಪುರ್ ವೆನ್ ಸಿರೀಸ್ನಲ್ಲಿ ಧಾರ್ಮಿಕ ಭಾವನೆಗಳಿಗೆ ಹಾಗೂ ನಂಬಿಕೆಗಳನ್ನು ಹೀಯಾಳಿಸಲಾಗಿದೆ. ಸಂಬಂಧಗಳನ್ನು ಹೀನಾಯವಾಗಿ ತೋರಿಸಲಾಗಿದೆ ಎಂಬ ಆಧಾರದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ: 'ತಾಂಡವ್'ನಲ್ಲಿ ಹಿಂದೂ ದೇವತೆಗಳಿಗೆ ಅವಮಾನ: ವೆಬ್ಸಿರೀಸ್ ಬ್ಯಾನ್ಗೆ ಪತ್ರ ಬರೆದ ಸಂಸದ
ಇದಕ್ಕೂ ಮೊದಲು ಮಿರ್ಜಾಪುರ್ ವೆಬ್ ಸಿರೀಸ್ ಹಲವಾರು ವಿವಾದಗಳಿಗೆ ಸಿಲುಕಿತ್ತು. ಈ ವೆಬ್ ಸಿರೀಸ್ ಬಿಡುಗಡೆ ವೇಳೆಯೇ ಹಲವಾರು ನಾಯಕರು ಇದನ್ನು ವಿರೋಧಿಸಿದ್ದರು. ಮಿರ್ಜಾಪುರದ ಸಂಸದ ಮತ್ತು ಅಪ್ನಾ ದಳ ಪಕ್ಷ(ಎಸ್) ನಾಯಕಿ ಅನುಪ್ರಿಯಾ ಪಟೇಲ್ ಈ ವೆಬ್ ಸಿರೀಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕುರಿತು ಟ್ವೀಟ್ ಮಾಡಿದ್ದ ಅನುಪ್ರಿಯಾ ಪಟೇಲ್ ಈ ವೆಬ್ ಸಿರೀಸ್ನಿಂದ ಮಿರ್ಜಾಪುರ ಜಿಲ್ಲೆಯನ್ನು ಹಿಂಸಾತ್ಮಕ ಪ್ರದೇಶ ಎಂದು ಜನರು ಪರಿಗಣಿಸುತ್ತಾರೆ. ಅಷ್ಟು ಮಾತ್ರವಲ್ಲದೇ ಈ ವೆಬ್ಸಿರೀಸ್ನಲ್ಲಿ ಸಾಮಾಜಿಕ ಸ್ವಾಸ್ಥ್ಯ ಕದಡುವ ವಿಚಾರಗಳಿವೆ ಎಂದು ಆರೋಪಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿದ್ದರು.
ಇತ್ತೀಚೆಗೆ ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾಗುತ್ತಿರುವ ತಾಂಡವ್ ವೆಬ್ ಸಿರೀಸ್ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆಯ ಆರೋಪದಡಿಯಲ್ಲಿ ದೂರು ನೀಡಲಾಗಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಅಮೆಜಾನ್ ಪ್ರೈಮ್ಗೆ ಸಮನ್ಸ್ ನೀಡಿದೆ.