ರಾಯಪುರ: ಕೊರೊನಾ ಚಿಕಿತ್ಸೆಗಾಗಿ ನೀಡುವ ಔಷಧಿಗಳ ಬಗ್ಗೆ "ಸುಳ್ಳು" ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಛತ್ತೀಸ್‌ಗಢದ ರಾಯ್‌ಪುರದ ಪೊಲೀಸರು ಯೋಗ ಗುರು ಬಾಬಾ ರಾಮದೇವ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಛತ್ತೀಸ್‌ಗಢದ ಘಟಕವು ನೀಡಿದ ದೂರಿನ ಆಧಾರದ ಮೇಲೆ ರಾಮಕೃಷ್ಣ ಯಾದವ್ ಅಲಿಯಾಸ್ ಬಾಬಾ ರಾಮ್‌ದೇವ್ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಯಾದವ್ ತಿಳಿಸಿದ್ದಾರೆ.
ರಾಮದೇವ್ ವಿರುದ್ಧ ಸೆಕ್ಷನ್ 188, 269, 504 ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆ ದೂರು ನೀಡಿದ ವೈದ್ಯರಲ್ಲಿ ಐಎಂಎ ಆಸ್ಪತ್ರೆ ಮಂಡಳಿ (ಸಿಜಿ) ಅಧ್ಯಕ್ಷ ಡಾ.ರಾಕೇಶ್ ಗುಪ್ತಾ, ಐಎಂಎ ರಾಯಪುರ ಅಧ್ಯಕ್ಷ ಮತ್ತು ವಿಕಾಸ್ ಅಗರ್ವಾಲ್ ಸೇರಿದ್ದಾರೆ.
ದೂರಿನ ಪ್ರಕಾರ, ಕಳೆದ ಒಂದು ವರ್ಷದಿಂದ ರಾಮದೇವ್ ಅವರು ವೈದ್ಯಕೀಯ ಭ್ರಾತೃತ್ವ, ಭಾರತ ಸರ್ಕಾರ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಇತರ ಮುಂಚೂಣಿ ಸಂಸ್ಥೆಗಳು ಬಳಸುವ ಔಷಧಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಮತ್ತು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಅವರ ಹಲವಾರು ವಿಡಿಯೋಗಳಿವೆ. ಅದರಲ್ಲಿ ಅವರು ಇಂತಹ ದಾರಿ ತಪ್ಪಿಸುವ ಟೀಕೆಗಳನ್ನು ಮಾಡಿದ್ದಾರೆ ಎಂದು ಹೇಳಿದೆ. ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಸರ್ಕಾರಿ, ಆಡಳಿತದ ಎಲ್ಲಾ ಶಾಖೆಗಳು ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ, ರಾಮ್‌ದೇವ್ ಅವರ ಈ ಹೇಳಿಕೆಗಳು ಜನರನ್ನು ದಾರಿತಪ್ಪಿಸುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
90 ರಷ್ಟು ರೋಗಿಗಳನ್ನು ಗುಣಪಡಿಸುತ್ತಿರುವ ಆಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಅಲೋಪತಿ ಔಷಧಿಗಳ ಬಗ್ಗೆ ರಾಮ್‌ದೇವ್ ಹೇಳಿಕೆ ನೀಡಿರುವುದು ಜನರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ಐಎಂಎ ಆರೋಪಿಸಿದೆ.