ನಾಂದೇಡ್ (ಮಹಾರಾಷ್ಟ್ರ): ಡಾ. ಶಂಕರರಾವ್ ಚವ್ಹಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಡೀನ್ ಡಾ. ಶ್ಯಾಮರಾವ್ ವಾಕೋಡೆ ಅವರನ್ನು ಒತ್ತಾಯಪೂರ್ವಕವಾಗಿ ಶೌಚಾಲಯ ಸ್ವಚ್ಛಗೊಳಿಸುವಂತೆ ಮಾಡಿದ್ದ ಶಿಂಧೆ ಬಣದ ಸಂಸದ ಹೇಮಂತ್ ಪಾಟೀಲ್ ಅವರ ಮೇಲೆ ಎಫ್ಐಆರ್ ದಾಖಲಾಗಿದೆ.
ಹೇಮಂತ್ ಪಾಟೀಲ್ ವಿರುದ್ಧ ಸರ್ಕಾರಿ ವೈದ್ಯಕೀಯ ಕಾಲೇಜು ಡೀನ್ ಎಸ್ ಆರ್ ವಾಕೋಡೆ ದೂರು ನೀಡಿದ್ದು, ನಾಂದೇಡ್ ಗ್ರಾಮಾಂತರ ಪೊಲೀಸರು ಹೇಮಂತ್ ಪಾಟೀಲ್ ವಿರುದ್ಧ ಬುಧವಾರ ಬೆಳಗ್ಗೆ ಎಫ್ಐಆರ್ ದಾಖಲಿಸಿದ್ದಾರೆ ಎಂದು ಎಸ್ಡಿಪಿಒ ಸುಶೀಲ್ ಕುಮಾರ್ ನಾಯಕ್ ತಿಳಿಸಿದ್ದಾರೆ. ಐಪಿಸಿ ಹಲವು ಸೆಕ್ಷನ್ಗಳ ಅಡಿ ಕ್ರಿಮಿನಲ್ ಬೆದರಿಕೆ ಮತ್ತು ಮಾನನಷ್ಟ, ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯ್ದೆಹಾಗೂ ಮಹಾರಾಷ್ಟ್ರ ಮೆಡಿಕೇರ್ ಸರ್ವಿಸ್ ಪರ್ಸನ್ಸ್ ಮತ್ತು ಮೆಡಿಕೇರ್ ಸರ್ವಿಸ್ ಇನ್ಸ್ಟಿಟ್ಯೂಷನ್ಸ್ (ಹಿಂಸಾಚಾರ ಮತ್ತು ಹಾನಿ ಅಥವಾ ಆಸ್ತಿ ನಷ್ಟ) ಕಾಯ್ದೆ ಅಡಿ ಎಫ್ಐಆರ್ ದಾಖಲಿಸಲಾಗಿದೆ.
ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ 31 ಸಾವುಗಳು ವರದಿಯಾದ ಹಿನ್ನೆಲೆ ಸಂಸದ ಹೇಮಂತ್ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ, ಆಸ್ಪತ್ರೆಯ ಅನೈರ್ಮಲ್ಯದ ಬಗ್ಗೆ ಹೇಮಂತ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಡೀನ್ ಎಸ್ ಆರ್ ವಾಕೋಡೆ ಅವರಿಂದಲೇ ಆಸ್ಪತ್ರೆಯ ಶೌಚಾಲಯಗಳನ್ನು ನೇರವಾಗಿ ಸ್ವಚ್ಛಗೊಳಿಸಿದ್ದರು.
ಆಸ್ಪತ್ರೆಯ ನೈರ್ಮಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ, ಆಸ್ಪತ್ರೆಯ ಆಡಳಿತವನ್ನು ಟೀಕಿಸಿದ್ದರು. ಜೊತೆಗೆ ಡೀನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ಇದಾದ ಬಳಿಕ ಡೀನ್ ಎಸ್ ಆರ್ ವಾಕೋಡೆ ಹೇಮಂತ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ನಾಂದೇಡ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂಸದ ಹೇಮಂತ್ ಪಾಟೀಲ್ ವಿರುದ್ಧದೌರ್ಜನ್ಯ ಪ್ರಕರಣ ದಾಖಲಾಗಿದೆ.
ಸರ್ಕಾರಿ ವೈದ್ಯಕೀಯ ಕಾಲೇಜು ಡೀನ್ ಜೊತೆಗೆ ಸಂಸದ ಹೇಮಂತ್ ಪಾಟೀಲ್ ಅವರ ಅನುಚಿತ ವರ್ತನೆಗೆ ಸಂಬಂಧಿಸಿದಂತೆ ಕೇಂದ್ರ ಎಂಎಆರ್ಡಿ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಆರೋಗ್ಯ ಕುಸಿದರೆ ಅದಕ್ಕೆ ಸರ್ಕಾರವೇ ಹೊಣೆ. ಈ ಘಟನೆಯು ಅಧಿಕಾರಿಗಳ ಮಾನಸಿಕ ಕ್ಷೋಭೆಗೆ ಕಾರಣವಾಗಿದ್ದು, ಇಡೀ ವೈದ್ಯರಿಗೆ ಮಾಡಿದ ಅವಮಾನವಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೇಮಂತ್ ಪಾಟೀಲ್ ಅವರು ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮಹಾರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಂಎಆರ್ಡಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ನಾಂದೇಡ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು: ವೈದ್ಯಾಧಿಕಾರಿಯಿಂದ ಕೊಳಕಾಗಿದ್ದ ಶೌಚಾಲಯ ತೊಳಿಸಿದ ಸಂಸದ- ವಿಡಿಯೋ