ಅಹಮದಾಬಾದ್(ಗುಜರಾತ್): ನಿನ್ನೆ ನಡೆದ ಎಬಿವಿಪಿ ಹಾಗೂ ಎನ್ಎಸ್ಯುಐ ನಡುವಿನ ಸಂಘರ್ಷದಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಇಂದು ಈ ಎರಡೂ ಸಂಘಟನೆಗಳ ಮೇಲೆ ಅಹಮದಾಬಾದ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ನಿನ್ನೆ ಬೆಳಗ್ಗೆ ಎನ್ಎಸ್ಯುಐ ಸಂಘಟನೆಯು ಜೆಎನ್ಯು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಪ್ರತಿಭಟನೆ ನಡೆಸಲೆಂದು ಎಬಿವಿಪಿ ಕಚೇರಿ ಎದುರು ಜಮಾಯಿಸಿತ್ತು. ಈ ವೇಳೆ, ಎಬಿವಿಪಿ ಕಾರ್ಯಕರ್ತರಿಗೂ ಹಾಗೂ ಎನ್ಎಸ್ಯುಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಗಿ ಪ್ರತಿಭಟನೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು.
ಎರಡು ಸಂಘಟನೆಗಳ ನಡುವಿನ ಸಂಘರ್ಷ ತೀವ್ರವಾಗುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಪೊಲೀಸರು, ಗುಂಪು ಚದುರಿಸಲು ಲಾಠಿ ಚಾರ್ಜ ನಡೆಸಿದ್ದು, ಅಷ್ಟೊತ್ತಿಗಾಗಲೇ 10ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದರು.
ಎಬಿವಿಪಿ ಎನ್ಎಸ್ಯುಐ ನಡುವೆ ಮಾರಾಮಾರಿ: 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ಇನ್ನು ಈ ಬಗ್ಗೆ ನಿನ್ನೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿತ್ತು.
ಪೊಲೀಸ್ ಇಲಾಖೆ ಈ ಬಗ್ಗೆ ನಿನ್ನೆಯೇ ಸ್ಪಷ್ಟಪಡಿಸಿದ್ದು, ಈ ಗಲಾಟೆಯಲ್ಲಿ ತೊಡಗಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದು, ಇಂದು ಎರಡು ಸಂಘಟನೆಗಳ ಮೇಲೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದೆ.