ನವದೆಹಲಿ: ಗೃಹ ಸಾಲ ಎಂಬುದು ಉಳಿತಾಯವಲ್ಲ ಎಂಬ ತಮ್ಮ ಸಿದ್ಧಾಂತವನ್ನು ಮರು ಪರಿಶೀಲಿಸುವಂತೆ ಹಣಕಾಸು ಕಾರ್ಯದರ್ಶಿ ಟಿ ವಿ ಸೋಮನಾಥನ್ ಅವರನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಭಾನುವಾರ ಒತ್ತಾಯಿಸಿದ್ದಾರೆ. ಹಳೆ ತೆರಿಗೆ ಪದ್ಧತಿಯ ಬಗ್ಗೆ ಮಾತನಾಡಿದ್ದ ಸೋಮನಾಥನ್, ಬಜೆಟ್ನಲ್ಲಿ ನೀಡಲಾಗಿರುವ ತೆರಿಗೆ ವಿನಾಯಿತಿಗಳ ಸ್ವರೂಪವನ್ನು ನೋಡಿದರೆ, ಅವುಗಳಲ್ಲಿ ಅರ್ಧದಷ್ಟು ಉಳಿತಾಯಕ್ಕಾಗಿ ಮತ್ತು ಇನ್ನರ್ಧದಷ್ಟು ಗೃಹ ಸಾಲ ಅಥವಾ ಗೃಹ ಸಾಲಗಳ ಬಡ್ಡಿ ಉಳಿತಾಯಕ್ಕಾಗಿ ಎಂದು ಹೇಳಿದ್ದರು.
ಹೌಸಿಂಗ್ ಲೋನ್ ಉಳಿತಾಯವೇ? ಎಂದು ಹಣಕಾಸು ಕಾರ್ಯದರ್ಶಿ ಪ್ರಶ್ನಿಸುತ್ತಾರೆ, ಅಲ್ಲ ಎಂದು ಅವರೇ ಹೇಳುತ್ತಾರೆ. ಆದರೆ ಹಣಕಾಸು ಕಾರ್ಯದರ್ಶಿಗಳ ಈ ಅಭಿಪ್ರಾಯವನ್ನು ಎಷ್ಟು ಜನ ಒಪ್ಪುಬಹುದು ಎಂದು ನಾನು ಆಶ್ಚರ್ಯ ಪಡುತ್ತೇನೆ ಎಂದು ಚಿದಂಬರಂ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಬಡ್ಡಿ ಪಾವತಿ ಮತ್ತು ಸಾಲದ ಕಂತುಗಳು ಒಂದರ್ಥದಲ್ಲಿ ವೆಚ್ಚದ ವಿಷಯಗಳಾಗಿವೆ. ಆದರೆ ಇದು ಒಂದು ಆಸ್ತಿಯಾಗಿ ಪರಿವರ್ತನೆಯಾಗುವ ವೆಚ್ಚವಾಗಿದೆ, ಇದು ಉಳಿತಾಯವಾಗಿದೆ ಎಂದು ಚಿದಂಬರಂ ವಾದಿಸಿದ್ದಾರೆ.
ನೀವು ಅದೇ ಹಣವನ್ನು ರಜಾ ದಿನಗಳಲ್ಲಿ ಅಥವಾ ರೇಸ್ ಕೋರ್ಸ್‌ನಲ್ಲಿ ಖರ್ಚು ಮಾಡುತ್ತೀರಿ ಎಂದು ಭಾವಿಸೋಣ. ಆಗ ಕೊನೆಯಲ್ಲಿ ಯಾವುದೇ ಆಸ್ತಿ ಇರುವುದಿಲ್ಲ. ಹೌಸಿಂಗ್ ಲೋನ್ ಉಳಿತಾಯವಲ್ಲ ಎಂಬ ತಮ್ಮ ಸಿದ್ಧಾಂತವನ್ನು ಹಣಕಾಸು ಕಾರ್ಯದರ್ಶಿ ಮರು ಪರಿಶೀಲಿಸಬೇಕು ಎಂದು ಚಿದಂಬರಂ ಹೇಳಿದರು.
ಮಾಧ್ಯಮ ಸಂದರ್ಶನವೊಂದರಲ್ಲಿ ಹಣಕಾಸು ಕಾರ್ಯದರ್ಶಿ ಟಿ ವಿ ಸೋಮನಾಥನ್ ಹೀಗೆ ಹೇಳಿದ್ದರು: "ಹಳೆ ತೆರಿಗೆ ಪದ್ಧತಿಯು ಉಳಿತಾಯವನ್ನು ಪ್ರೋತ್ಸಾಹಿಸುತ್ತದೆ ಎಂಬ ಗ್ರಹಿಕೆಯನ್ನು ನಾನು ಒಪ್ಪುವುದಿಲ್ಲ. ನೀವು ತೆರಿಗೆ ವಿನಾಯಿತಿಗಳ ಸ್ವರೂಪವನ್ನು ನೋಡಿದರೆ, ಅವುಗಳಲ್ಲಿ ಅರ್ಧದಷ್ಟು ಉಳಿತಾಯಕ್ಕಾಗಿ ಮತ್ತು ಅರ್ಧದಷ್ಟು ಗೃಹ ಸಾಲ ಅಥವಾ ವಸತಿ ಸಾಲದ ಮೇಲಿನ ಬಡ್ಡಿಯಂತಹ ಉಳಿತಾಯಕ್ಕಾಗಿ ಇವೆ. ಗೃಹ ಸಾಲವು ಉಳಿತಾಯವೇ? ಹಾಗಾಗಿ ಒಟ್ಟಾರೆ ಸ್ಥೂಲ ಆರ್ಥಿಕ ಪರಿಣಾಮದ ಬಗ್ಗೆ ನೋಡಿದರೆ, ಇದು ಉಳಿತಾಯದ ಕಡೆಗಿನ ನಡೆಯಲ್ಲ ಆದರೆ ಇದು ಕೆಲ ನಿರ್ದಿಷ್ಟ ವಸ್ತುಗಳ ಕಡೆಗಿನ ನಡೆಯಾಗಿದೆ. ನೀವು ಮನೆ ನಿರ್ಮಾಣ ಮಾಡಿಕೊಳ್ಳಬೇಕೆಂದು, ವಿಮೆ ಪಡೆಯಬೇಕೆಂದು ಅಥವಾ ಪಿಂಚಣಿ ಯೋಜನೆ ಪಡೆಯಬೇಕೆಂದು ಸರ್ಕಾರ ಬಯಸುತ್ತದೆ. ಆದರೆ ಇದು ನಿರ್ದಿಷ್ಟವಾಗಿ ಉಳಿತಾಯದ ಯತ್ನವೇ ಆಗಿರಬೇಕಿಲ್ಲ ಅಥವಾ ಇದು ದೇಶದಲ್ಲಿ ಉಳಿತಾಯ ಪ್ರಮಾಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವ ಹಾಗಿಲ್ಲ."
ಅದಾನಿ ಷೇರು ಕುಸಿತದಿಂದ ಆತಂಕ ಬೇಡ: ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಕುಸಿತದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಭಾರತದ ಹಣಕಾಸು ಕಾರ್ಯದರ್ಶಿ ಟಿ ವಿ ಸೋಮನಾಥನ್, ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳು ಅಥವಾ ವಿಮಾ ಕಂಪನಿಗಳ ಠೇವಣಿದಾರರು, ಪಾಲಿಸಿದಾರರು ಅಥವಾ ಹೂಡಿಕೆದಾರರಿಗೆ ಯಾವುದೇ ಆತಂಕವಿಲ್ಲ ಎಂದು ಹೇಳಿದರು. ಯಾವುದೇ ಕಂಪನಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಭಾರತೀಯ ಜೀವ ವಿಮಾ ನಿಗಮಗಳು ನೀಡಿದ ಸಾಲದ ಪ್ರಮಾಣವು ಹೂಡಿಕೆದಾರರಿಗೆ ಅಪಾಯಕಾರಿಯಾಗುವ ಮಟ್ಟಕ್ಕಿಂತ ತೀರಾ ಕಡಿಮೆಯಾಗಿದೆ ಎಂದರು.
ಇದನ್ನೂ ಓದಿ: ಗೃಹಸಾಲ ಬೇಕಾ? ಹಾಗಾದ್ರೆ ಕ್ರೆಡಿಟ್ ಸ್ಕೋರ್ ಉತ್ತಮವಾಗಿಟ್ಟುಕೊಳ್ಳಿ..!