ನವದೆಹಲಿ: ಸೋಷಿಯಲ್ ಮೀಡಿಯಾ, ಒಟಿಟಿ (ಓವರ್ ದಿ ಟಾಪ್) ಮತ್ತು ವೆಬ್ಸೈಟ್ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಗಾಗಲೇ ಕೆಲವೊಂದು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಈ ಮೂಲಕ ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಇದರ ಬೆನ್ನಲ್ಲೇ ಕೆಲವು ಓವರ್ ದಿ ಟಾಪ್(ಒಟಿಟಿ) ಪ್ಲಾಟ್ಫಾರ್ಮ್ಗಳು ಕೆಲವೊಂದು ಸಮಯದಲ್ಲಿ ಅಶ್ಲೀಲ ದೃಶ್ಯಗಳನ್ನು ತೋರಿಸುತ್ತಿದ್ದು, ಇಂತಹ ಕಾರ್ಯಕ್ರಮ ಪ್ರದರ್ಶಿಸಲು ಸ್ಕ್ರೀನಿಂಗ್ ವ್ಯವಸ್ಥೆ ಇರಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ.
ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಅಮೆಜಾನ್ ಪ್ರೈಮ್ ವಿಡಿಯೋದ ಭಾರತದ ಮುಖ್ಯಸ್ಥ ಅಪರ್ಣಾ ಪುರೋಹಿತ್ ಸಲ್ಲಿಕೆ ಮಾಡಿದ್ದ ಮನವಿ ಆಲಿಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಸಾಮಾಜಿಕ ಮಾಧ್ಯಮ ವೇದಿಕೆ ನಿಯಂತ್ರಿಸುವ ಸರ್ಕಾರದ ಇತ್ತೀಚಿನ ಮಾರ್ಗಸೂಚಿಗಳನ್ನು ಕೋರ್ಟ್ ಮುಂದಿಡುವಂತೆ ತಿಳಿಸಿದೆ. ಇದರ ಜತೆಗೆ ವೆಬ್ ಸರಣಿ 'ತಾಂಡವ್' ಮೂಲಕ ಅಪರ್ಣಾ ವಿರುದ್ಧ ದಾಖಲಾದ ಎಫ್ಐಆರ್ನಲ್ಲಿ ನಿರೀಕ್ಷಿನ ಜಾಮೀನು ನೀಡಲು ನಿರಾಕರಿಸಿದೆ.
ಅಪರ್ಣಾ ಪರ ಕೋರ್ಟ್ಗೆ ಹಾಜರಾದ ವಕೀಲ್ ಮುಕುಲ್ ರೋಹಟಗಿ, ಆಕೆ ಅಮೆಜಾನ್ನಲ್ಲಿ ಕೇವಲ ಉದ್ಯೋಗಿ. ನಿರ್ಮಾಪಕಿ ಅಥವಾ ನಟಿಯಲ್ಲ. ಆಕೆಯ ವಿರುದ್ಧ ದಾಖಲಾಗಿರುವ ಪ್ರಕರಣ ಆಘಾತಕಾರಿ ಎಂದು ತಿಳಿದ್ದಾರೆ.
ಇದನ್ನೂ ಓದಿ: ಒಟಿಟಿ ನಿಯಂತ್ರಣಕ್ಕೆ ಕ್ರಮ: ಕೇಂದ್ರ ಸರ್ಕಾರದಿಂದ ಕಟ್ಟುನಿಟ್ಟಿನ ಮಾರ್ಗಸೂಚಿ ರಿಲೀಸ್
ಬಾಲಿವುಡ್ ನಟ ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯಾ ಮತ್ತು ಮೊಹಮ್ಮದ್ ಝಿಶನ್ ಅಯೂಬ್ ಅಭಿನಯದ ಒಂಬತ್ತು ಸಂಚಿಕೆಗಳ 'ತಾಂಡವ್'ವಿವಾದಕ್ಕೆ ಸಹ ಗುರಿಯಾಗಿದೆ.
ಇತ್ತೀಚಿಗೆ ಓವರ್ ದಿ ಟಾಪ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಸರಣಿ ಚಿತ್ರಗಳಲ್ಲಿನ ದೃಶ್ಯಗಳ ಬಗ್ಗೆ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಹಾಗೂ ಪ್ರಕಾಶ್ ಜಾವಡೇಕರ್ ಕಳೆದ ಕೆಲ ದಿನಗಳ ಹಿಂದೆ ಇವುಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ರಿಲೀಸ್ ಮಾಡಿದ್ದಾರೆ. ಪ್ರಮುಖವಾಗಿ ಆಕ್ಷೇಪಾರ್ಹ ವಿಷಯಗಳು ಕಂಡು ಬಂದರೆ ತಕ್ಷಣವೇ ಡಿಲೀಟ್ ಮಾಡುವಂತೆ ಸೂಚನೆ ನೀಡಲಾಗಿತ್ತು.