ನವದೆಹಲಿ: ವ್ಯಾಪಾರ ಆಧಾರಿತ ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ಇಡಿ ಇಬ್ಬರನ್ನು ಬಂಧಿಸಿದೆ. ದೀಪಕ್ ಅಗರ್ವಾಲ್ ಮತ್ತು ಆಯುಷ್ ಗೋಯಲ್ ಬಂಧಿತ ಆರೋಪಿಗಳಾಗಿದ್ದಾರೆ. ಅಕ್ರಮ ಕಸ್ಟಮೈಸ್ಡ್ ಸಾಪ್ಟವೇರ್ ಮೂಲಕ 1,500 ಕೋಟಿ ರೂ.ಗಳನ್ನ ಭಾರತದಿಂದ ವಿದೇಶಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಇಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವಂತೆ, ಫೆಬ್ರವರಿ 22 ರಂದು ಅಗರ್ವಾಲ್ರನ್ನು ಬಂಧಿಸಿದರೆ, ಗೋಯಲ್ನನ್ನು ಫೆಬ್ರವರಿ 27 ರಂದು ಬಂಧಿಸಲಾಗಿದೆ. ಆದಾಯ ತೆರಿಗೆ ಇಲಾಖೆ ದೂರಿನ ಮೇರೆಗೆ ವಡ್ಡಿ ಮಹೇಶ್ ಮತ್ತು ಇತರರ ವಿರುದ್ಧ ಆಂಧ್ರ ಪ್ರದೇಶ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇಡಿ ಈ ಪ್ರಕರಣವನ್ನು ಭೇದಿಸಿದೆ.
ಮಹೇಶ್ ಪ್ರಮೋದ್ ಅಗರ್ವಾಲ್, ಗೋಯಲ್, ವಿಕಾಸ್ ಗುಪ್ತಾ ಹಾಗೂ ವಿನಿತ್ ಗೋಯೆಂಕಾ ಸೇರಿದಂತೆ ಇತರರಿಂದ ಹಣ ಸ್ವೀಕರಿಸುತ್ತಿದ್ದ ಈ ಹಣವನ್ನ ಸೆಲ್ ಕಂಪನಿಗಳ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿಯಮಿತವಾಗಿ ಮಹೇಶ್ ಸಿಂಗಪುರ, ಹಾಂಕಾಂಗ್, ಚೀನಾದಲ್ಲಿನ ಕಂಪನಿಗಳಿಗೆ ಆಮದು ಮಾಡಿಕೊಳ್ಳುವ ರೂಪದಲ್ಲಿ ಕಸ್ಟಮೈಸ್ಡ್ ಸಾಫ್ಟವೇರ್ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದ.
ಅಷ್ಟೇ ಅಲ್ಲ ಭಾರತೀಯ ಕಂಪನಿಗಳ ಹೆಸರಿನಲ್ಲಿ ಸಾಗರೋತ್ತರ ಕಂಪನಿಗಳಿಂದ ಖರೀದಿಸಿ ವಸ್ತುಗಳ ಬಗ್ಗೆ ಇನ್‌ವಾಯ್ಸ್‌ಗಳನ್ನು ಸಿದ್ಧಪಡಿಸುತ್ತಿದ್ದ ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳ ಸಹಾಯದಿಂದ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿ ಮಾಡುತ್ತಿದ್ದ. ಬಳಿಕ ಇವುಗಳನ್ನ "ಕಸ್ಟಮೈಸ್ ಮಾಡಿದ ಸಾಫ್ಟ್‌ವೇರ್" ಮೂಲಕ ಪ್ರಮಾಣೀಕರಣ ಮಾಡಿಸಿಕೊಳ್ಳುತ್ತಿದ್ದ ಎಂದು ಅಧಿಕಾರಿ ಹೇಳಿದ್ದಾರೆ.
ಅಂದ ಹಾಗೆ ದೀಪಕ್ ಅಗರ್ವಾಲ್, ಹಾಂಕಾಂಗ್ ಮೂಲದ ಕಂಪನಿಯೊಂದರ ನಿರ್ದೇಶಕರಾಗಿದ್ದಾರೆ. ಇವರ ಕಂಪನಿ ಸುಮಾರು 300 ಕೋಟಿ ರೂ. ಮೌಲ್ಯದ ವಿದೇಶಿ ರವಾನೆಗಳನ್ನು ಪಡೆದಿದೆ ಎಂಬುದನ್ನ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.