ಕತಿಹಾರ್(ಬಿಹಾರ): ಮರಣೋತ್ತರ ಪರೀಕ್ಷೆಗಾಗಿ ಮಗನ ಮೃತದೇಹವನ್ನು ಚೀಲದಲ್ಲಿ ಹಾಕಿಕೊಂಡು ಮೂರು ಕಿಲೋ ಮೀಟರ್ ಹೊತ್ತುಕೊಂಡು ಬಂದಿರುವ ಘಟನೆ ಬಿಹಾರದ ಕತಿಹಾರ್ದಲ್ಲಿ ನಡೆದಿದ್ದು, ಪೊಲೀಸ್ ಇಲಾಖೆ ಕರ್ತವ್ಯವನ್ನು ಪ್ರಶ್ನೆ ಮಾಡುವಂತಾಗಿದೆ.
ಬಿಹಾರದ ಖರಿಯಾ ಗಂಗನಾಡಿ ಘಾಟ್ನಲ್ಲಿ 13 ವರ್ಷದ ಬಾಲಕನ ಮೃತದೇಹ ಪತ್ತೆಯಾಗಿತ್ತು. ಇದರ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ರವಾನೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಆದರೆ ಅಧಿಕಾರಿಗಳು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಬರುವಂತೆ ಕುಟುಂಬಸ್ಥರಿಗೆ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದರು. ಹೀಗಾಗಿ ತಂದೆ ಮೂರು ಕಿಲೋ ಮೀಟರ್ ಮಗನ ಮೃತದೇಹ ಹೊತ್ತು ಸಾಗಿದ್ದಾರೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಎಸ್ಡಿಪಿಒ ಯೂ-ಟರ್ನ್ ಹೊಡೆದಿದ್ದು, ಪೊಲೀಸರ ಕರ್ತವ್ಯಲೋಪ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಮೃತದೇಹ ಆಸ್ಪತ್ರೆಗೆ ರವಾನೆ ಮಾಡಲು ಪೊಲೀಸ್ ಇಲಾಖೆ ಅಥವಾ ಸ್ಥಳೀಯ ಅಧಿಕಾರಿಗಳು ಕುಟುಂಬಕ್ಕೆ ಆಂಬ್ಯುಲೆನ್ಸ್ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಅಕ್ರಮವಾಗಿ ನಡೆಸುತ್ತಿದ್ದ ಕಲ್ಲು ಕ್ವಾರಿ ಮೇಲೆ ದಾಳಿ: ಸ್ಫೋಟಕಗಳು ವಶ
ಫೆಬ್ರವರಿ 26ರಂದು ತೀರ್ಥಂಗ ಗಂಗನಾಡಿಯಲ್ಲಿ ದೋಣಿಯಿಂದ ಬಿದ್ದು, 13 ವರ್ಷದ ಬಾಲಕನೋರ್ವ ನಾಪತ್ತೆಯಾಗಿದ್ದನು.ಇದಕ್ಕೆ ಸಂಬಂಧಿಸಿದಂತೆ ಗೋಪಾಲ್ಪುರ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿತ್ತು. ಮೃತದೇಹ ಪತ್ತೆಯಾಗುತ್ತಿದ್ದಂತೆ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಮೃತದೇಹ ತೆಗೆದುಕೊಂಡು ಬರುವಂತೆ ಹೇಳಿ ಪೊಲೀಸರು- ಅಧಿಕಾರಿಗಳು ಅಲ್ಲಿಂದ ತೆರಳಿದ್ದರು.