ಕಾಮರೆಡ್ಡಿ(ತೆಲಂಗಾಣ): ಕುಡುಕ ತಂದೆ ತನ್ನ ಏಳು ವರ್ಷದ ಮಗಳನ್ನು ಬೆಂಕಿಗೆ ಎಸೆದಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ವ್ಯಕ್ತಿ ಮಧ್ಯಪ್ರವೇಶಿ ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಬಿರ್ಕೂರು ತಾಲೂಕಿನ ಬರಂಗೇಡ್ಕಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.
ಸೈಲು ಹಾಗೂ ಗಂಗಾಧರ್ ನಡುವೆ ಕೊಟ್ಟಿಗೆಗೆ ಬೆಂಕಿ ಬಿದ್ದ ವಿಷಯಕ್ಕೆ ಜಗಳವಾಗಿದೆ. ಗಂಗಾಧರ್ ಅವರ ಕೊಟ್ಟಿಗೆಗೆ ಬೆಂಕಿ ಬಿದ್ದಿತ್ತು. ಸೈಲು ಅವರ ಮಗಳೇ ಬೆಂಕಿ ಹಚ್ಚಿದ್ದಾಳೆ ಎಂದು ಗಂಗಾಧರ್ ಆರೋಪಿಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ಯುದ್ಧ ನಡೆದಿದೆ. ಈ ಸಂದರ್ಭದಲ್ಲಿ ಕೋಪಗೊಂಡ ಸೈಲು ತನ್ನ ಮಗಳನ್ನು ಬೆಂಕಿಗೆ ಎಸೆದಿದ್ದಾನೆ. ಇದನ್ನು ಕಂಡ ಗಂಗಾಧರ್ ಕೂಡಲೇ ಬೆಂಕಿಗೆ ಹಾರಿ ಬಾಲಕಿಯನ್ನು ರಕ್ಷಿಸಿದ್ದಾರೆ. ಮಗುವಿನ ಎರಡೂ ಕೈ, ಕಾಲಿಗೆ ಸುಟ್ಟಗಾಯಗಳಾಗಿದೆ. ಕೂಡಲೇ 108 ಆಂಬ್ಯುಲೆನ್ಸ್ ವಾಹನದಲ್ಲಿ ಬಾಣಸುವಾಡ ಪ್ರಾದೇಶಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಮದ್ಯದ ಅಮಲಿನಲ್ಲಿ ವಿವೇಚನೆ ಕಳೆದುಕೊಂಡು ವರ್ತಿಸಿದ ಆರೋಪಿಯ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಡಂಪರ್-ಬಸ್ ಮಧ್ಯೆ ಡಿಕ್ಕಿ, ಧಗಧಗನೇ ಉರಿದ ವಾಹನಗಳು, 12 ಜನ ಸಜೀವದಹನ
ಪ್ರತ್ಯೇಕ ಪ್ರಕರಣ- ಇಬ್ಬರು ಮಕ್ಕಳು ಸಜೀವ ದಹನ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಬಿಹಾರ ರಾಜಧಾನಿ ಪಾಟ್ನಾದ ಗೌರಿಚಕ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊಹ್ಗಿ ರಾಂಪುರ ತಾಡ್ ಗ್ರಾಮದಲ್ಲಿ 2023 ಡಿಸೆಂಬರ್ 18ರ ಸೋಮವಾರ ತಡರಾತ್ರಿ ನಡೆದಿದೆ. ಮೃತರನ್ನು ಸಂಜಿತ್ ಕುಮಾರ್ ಎಂಬವರ ಪುತ್ರ ರಾಜಪಾಲ್ (7) ಮತ್ತು ಸುಕುನ್ ಕುಮಾರ್ ಅಲಿಯಾಸ್ ತುನ್ನಾ ಅವರ ಪುತ್ರಿ ಶ್ರೀಸ್ಟಿ (6) ಎಂದು ಗುರುತಿಸಲಾಗಿದೆ.
ಸಂಜಿತ್ ಕುಮಾರ್ ಸೋಮವಾರ ಕಾರಿನಿಂದ ಇಳಿದು ಡೋರ್ ಲಾಕ್ ಮಾಡದೇ ಮನೆಯೊಳಗೆ ಹೋಗಿದ್ದರು. ಹೀಗಾಗಿ ಮಕ್ಕಳು ಆಟವಾಡುತ್ತಾ ಕಾರಿನೊಳಗೆ ಹೋಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮಕ್ಕಳು ಆಟವಾಡುತ್ತಿದ್ದ ಸಮಯದಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನ ಸೆಂಟ್ರಲ್ ಲಾಕಿಂಗ್ ವ್ಯವಸ್ಥೆಯಿಂದಾಗಿ ಮಕ್ಕಳು ಒಳಗೆ ಸಿಲುಕಿಕೊಂಡಿದ್ದಾರೆ. ಹೀಗಾಗಿ ಮಕ್ಕಳನ್ನು ರಕ್ಷಿಸುವುದು ತಡವಾಗಿತ್ತು. ಬಳಿಕ ಕಿಟಕಿಗಳನ್ನು ಒಡೆದು ಮಕ್ಕಳನ್ನು ಹೊರತೆಗೆದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದಾಗಲೇ ಇಬ್ಬರೂ ಕಂದಮ್ಮಗಳು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು.