ನವದಹಲಿ: ಇಲ್ಲಿನ ಭಜನ್‌ಪುರ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಜಗಳ ನಡೆದು ದುಷ್ಕರ್ಮಿಗಳು ತಂದೆ ಹಾಗು ಮಗನ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವೀರೇಂದ್ರ ಅಗರ್ವಾಲ್ ಮತ್ತು ಅವರ ಪುತ್ರ ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಟ್ಪರ್‌ಗಂಜ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಐಪಿಸಿ ಕಲಂಗಳಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ನಡೆದಿದ್ದೇನು?: ವೀರೇಂದ್ರ ಅಗರ್ವಾಲ್ ತಮ್ಮ ಕುಟುಂಬದೊಂದಿಗೆ ಯಮುನಾ ವಿಹಾರದಲ್ಲಿ ವಾಸಿಸುತ್ತಿದ್ದಾರೆ. ಫುರ್ಕನ್ ಎಂಬ ವ್ಯಕ್ತಿಯೂ ಅದೇ ಪ್ರದೇಶದ ನಿವಾಸಿ. ಮತ್ತೊಬ್ಬ ಆರಿಫ್ ಎಂಬಾತ ಅವರ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದಾನೆ. ಗುರುವಾರ ವೀರೇಂದ್ರ ಅವರು ಆರಿಫ್ ಜೊತೆ ಕಾರು ನಿಲ್ಲಿಸುವ ವಿಚಾರವಾಗಿ ಜಗಳವಾಡಿದ್ದರಂತೆ. ನಂತರ ಎರಡೂ ಕಡೆಯವರು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆಯೂ ಗುರುವಾರ ರಾತ್ರಿ ವೀರೇಂದ್ರ ತಮ್ಮ ಪುತ್ರನೊಂದಿಗೆ ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದಾಗ, ರಾತ್ರಿ ಒಂದು ಗಂಟೆಯ ಸುಮಾರಿಗೆ ಇಬ್ಬರ ನಡುವೆ ಮತ್ತೆ ಜಗಳ ನಡೆದಿದೆ.
''ಗುರುವಾರ ರಾತ್ರಿ ತಂದೆಯವರು ಸಹೋದರ ಮದುವೆ ಸಮಾರಂಭದಿಂದ ಮನೆಗೆ ಹಿಂದಿರುಗಿದ್ದಾಗ ಪಾರ್ಕಿಂಗ್ ಸ್ಥಳದಲ್ಲಿ ವಾಹನವೊಂದು ನಿಂತಿತ್ತು. ಆ ವಾಹನವನ್ನು ದಾರಿಗೆ ಅಡ್ಡಲಾಗಿ ನಿಲ್ಲಿಸಲಾಗಿತ್ತು. ವಾಹನವನ್ನು ತೆಗೆಯುವಂತೆ ಕಾರ್ ಮಾಲೀಕರನ್ನು ಒತ್ತಾಯಿಸಿದ್ದಾರೆ. ಅವರು ವಾಹನ ತೆಗೆಯುವ ಬದಲು ಆಕ್ರೋಶಗೊಂಡು ಪಿಸ್ತೂಲ್ ಹೊರ ತೆಗೆದು ಗುಂಡು ಹಾರಿಸಿದ್ದಾರೆ'' ಎಂದು ಸೌರಭ್ ಅಗರ್ವಾಲ್ ತಿಳಿಸಿದ್ದಾರೆ.
ಈಶಾನ್ಯ ದೆಹಲಿ ಎಡಿಸಿಪಿ ಮಾಹಿತಿ: ಈಶಾನ್ಯ ದೆಹಲಿಯ ಎಡಿಸಿಪಿ ಸಂಧ್ಯಾ ಸ್ವಾಮಿ ಮಾತನಾಡಿ, ''ಆರೋಪಿ ಆರಿಫ್ ಸಂತ್ರಸ್ತರ ಮನೆ ಸಮೀಪ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಜಗಳವಾಗಿದೆ. ಆತ ತಲೆಮರೆಸಿಕೊಂಡಿದ್ದಾನೆ. ಮತ್ತೊಬ್ಬ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇದರಲ್ಲಿ ಯಾವುದೇ ಕೋಮುವಾದದ ಅಂಶವಿಲ್ಲ. ಸ್ಥಳದಲ್ಲಿ ಶಾಂತಿ ನೆಲೆಸಿದೆ. ಈ ಬಗ್ಗೆ ಪೊಲೀಸರು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ'' ಎಂದರು.
ಇದನ್ನೂ ಓದಿ: ಚಿನ್ನದ ಫ್ಯಾಕ್ಟರಿಯಲ್ಲಿ 1.56 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಉದ್ಯೋಗಿಗಳು: ನಾಲ್ವರ ಬಂಧನ