ಶ್ರೀನಗರ : ಹುತಾತ್ಮ ಅಧಿಕಾರಿ ಡಿಎಸ್ಪಿ ಹುಮಾಯೂನ್ ಭಟ್ ಪಾರ್ಥಿವ ಶರೀರದ ಮೇಲೆ ಅವರ ತಂದೆ ಗುಲಾಮ್ ಹಸನ್ ಭಟ್ ಪುಷ್ಪಗುಚ್ಛ ಇರಿಸುತ್ತಿರುವ ಫೋಟೊ ಮನಕಲಕುವಂತಿದ್ದರೂ, ಆ ಸಮಯದಲ್ಲಿ ಓರ್ವ ತಂದೆಯಾಗಿ ಅವರು ತೋರಿಸಿದ ಸಂಯಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಿವೃತ್ತ ಐಜಿಪಿ ಗುಲಾಮ್ ಹಸನ್ ಭಟ್ ಅವರು ಶ್ರೀನಗರದ ಜಿಲ್ಲಾ ಪೊಲೀಸ್ ಲೈನ್ಸ್ ಕಚೇರಿಯಲ್ಲಿ ತಮ್ಮ ಮಗನ ಶವದ ಪಕ್ಕದಲ್ಲಿ ಒಂದೇ ಒಂದು ಹನಿ ಕಣ್ಣೀರು ಸುರಿಸದೆ ನಿಂತಿರುವುದು ಈ ಕಾಶ್ಮೀರಿ ಅಧಿಕಾರಿಯ ದೃಢತೆಯನ್ನು ಎತ್ತಿ ತೋರಿಸಿದೆ.
ಗುಲಾಮ್ ಹಸನ್ ಭಟ್ ಅವರು ಹುತಾತ್ಮ ಪುತ್ರನ ಶವಪೆಟ್ಟಿಗೆಗೆ ಪುಷ್ಪಗುಚ್ಛ ಅರ್ಪಿಸುವ ಸಮಯದಲ್ಲಿ ಎಡಿಜಿಪಿ ಜಾವೇದ್ ಮುಜ್ತಾಬಾ ಗಿಲಾನಿ ಅವರ ಜೊತೆಗಿದ್ದರು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮುಖ್ಯ ಕಾರ್ಯದರ್ಶಿ ಅರುಣ್ ಮೆಹ್ತಾ, ಡಿಜಿಪಿ ದಿಲ್ಬಾಗ್ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ನ ಇತರ ಎಲ್ಲಾ ಹಿರಿಯ ಅಧಿಕಾರಿಗಳು ಹುತಾತ್ಮ ಅಧಿಕಾರಿಗೆ ಅಂತಿಮ ಗೌರವ ಸಲ್ಲಿಸಿದರು.
ಜೆಕೆಪಿಎಸ್ ನ 2018ರ ಬ್ಯಾಚ್ ಅಧಿಕಾರಿಯಾಗಿರುವ ಹುಮಾಯೂನ್ ಕಳೆದ ವರ್ಷವಷ್ಟೇ ವಿವಾಹವಾಗಿದ್ದರು. ಅವರ ಪತ್ನಿ ಕೇವಲ 26 ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಈಗ ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಇಷ್ಟಾದರೂ ತಂದೆ ಗುಲಾಮ್ ಹಸನ್ ಭಟ್ ಉಮ್ಮಳಿಸಿ ಬರುತ್ತಿದ್ದ ದುಃಖ ಮತ್ತು ಕಣ್ಣೀರನ್ನು ಮರೆಮಾಚಿ ಹುತಾತ್ಮ ಮಗನಿಗೆ ವೀರನಮನ ಸಲ್ಲಿಸಿದ ಚಿತ್ರ ಬಹಳ ದಿನಗಳ ಕಾಲ ಸ್ಮೃತಿಪಟಲದಲ್ಲಿ ಉಳಿಯುವಂಥದ್ದಾಗಿದೆ.
ತಂದೆಯಾಗಿ ಮಗನ ಸಾವಿನಿಂದ ಗುಲಾಮ್ ಹಸನ್ ಭಟ್ ದುಃಖಿತರಾಗಿದ್ದು ನಿಜ. ಆದರೆ ತಾವು ಮತ್ತು ತಮ್ಮ ಮಗ ದೇಶದ ಪೊಲೀಸ್ ಸೇವೆಗೆ ಸೇರುವಾಗ ತೆಗೆದುಕೊಂಡ ಪ್ರತಿಜ್ಞೆಗೆ ಅನುಗುಣವಾಗಿ ನಡೆದುಕೊಂಡಿದ್ದು ಮಾತ್ರ ವೀರೋಚಿತವಾಗಿತ್ತು. ಇಂಥ ಸಮಯದಲ್ಲಿಯೂ ಭಟ್ ಅವರು ತೋರಿಸಿದ ಧೈರ್ಯ ಮತ್ತು ಸಂಯಮವನ್ನು ಭವಿಷ್ಯದಲ್ಲಿ ಪ್ರತಿ ಪೊಲೀಸ್ ತರಬೇತಿ ಶಾಲೆ, ಕಾಲೇಜು ಮತ್ತು ಅಕಾಡೆಮಿಗಳಲ್ಲಿ ಭವಿಷ್ಯದ ಪೊಲೀಸರಿಗೆ ಉದಾಹರಣೆಯಾಗಿ ಉಲ್ಲೇಖಿಸಲಾಗುವುದು. ಈ ತಂದೆ ಜೀವಂತ ದಂತಕಥೆಯಾಗಿದ್ದು, ದೇಶದ ಭವಿಷ್ಯದ ಅಧಿಕಾರಿಗಳಿಗೆ ಸ್ಫೂರ್ತಿದಾಯಕವಾಗಿದ್ದಾರೆ.
ಹುಮಾಯೂನ್ ಅನಂತನಾಗ್ ಜಿಲ್ಲೆಯ ಕೊಕರ್ನಾಗ್ ಪ್ರದೇಶದಲ್ಲಿ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ಆಗಿದ್ದರು. ಗಾಡೋಲ್ ಪರ್ವತ ಪ್ರದೇಶದಲ್ಲಿ ಭಯೋತ್ಪಾದಕರು ನುಸುಳಿರುವ ಬಗ್ಗೆ ಮಾಹಿತಿ ಪಡೆದ ನಂತರ ಅಲ್ಲಿಗೆ ತೆರಳಿದ ಭದ್ರತಾ ಅಧಿಕಾರಿಗಳ ತಂಡದಲ್ಲಿ ಇವರೂ ಇದ್ದರು. ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಸೇನೆಯ ಕರ್ನಲ್ ಮನ್ಪ್ರೀತ್ ಸಿಂಗ್, 19 ರಾಷ್ಟ್ರೀಯ ರೈಫಲ್ಸ್ನ ಸಿಒ ಮೇಜರ್ ಆಶಿಶ್ ಧೋಂಚಕ್ ಮತ್ತು ಡಿವೈಎಸ್ಪಿ ಹುಮಾಯೂನ್ ಭಟ್ ತೀವ್ರ ಗುಂಡಿನ ದಾಳಿ ಎದುರಿಸಬೇಕಾಯಿತು. ಇದೇ ಮೂವರು ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿದ್ದರು.
ಹೋರಾಟದಲ್ಲಿ ತೀವ್ರವಾಗಿ ಗಾಯಗೊಂಡ ಮೂವರನ್ನೂ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರದೃಷ್ಟವಶಾತ್ ಮೂವರು ಅಧಿಕಾರಿಗಳಿಗೆ ತೀವ್ರ ರಕ್ತಸ್ರಾವವಾಗಿತ್ತು. ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಮೂವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಇವರೆಲ್ಲರೂ ರಾಷ್ಟ್ರಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದರು.
ಇದನ್ನೂ ಓದಿ : ಜಗತ್ತಿನ ಶೇ 33ರಷ್ಟು ಜನ ಇಂಟರ್ನೆಟ್ನಿಂದ ದೂರ: ವಿಶ್ವಸಂಸ್ಥೆ ವರದಿ