ಪೂರ್ವ ಗೋದಾವರಿ : ಸೊಸೆ ನಮ್ಮ ಮನೆಯ ಮರ್ಯಾದೆ ಹರಾಜು ಹಾಕಿದ್ದಾಳೆ ಎಂದು ಆಕೆಯನ್ನು ಮಾವ ಕೊಲೆ ಮಾಡಿರುವ ಘಟನೆ ಮಲಿಕಿಪುರಂ ತಾಲೂಕಿನ ಮೆಡಿಚರ್ಲಪಾಲೆಂನಲ್ಲಿ ನಡೆದಿದೆ. ಮೆಡಿಚರ್ಲಪಾಲೆಂ ನಿವಾಸಿ ಚೊಪ್ಪಲ ಸತ್ಯನಾರಾಯಣ ತನ್ನ ಮಗ ವಿಜಯ್ಕುಮಾರ್ಗೆ ಏಳು ವರ್ಷಗಳ ಹಿಂದೆ ಪ್ರಿಯಾಮಣಿ (25) ಜೊತೆ ಮದುವೆ ಮಾಡಿಸಿದ್ದರು.
ಪ್ರಿಯಾಮಣಿ ಬೇರೆ ಯಾರೂ ಅಲ್ಲ ಸಂಬಂಧದಲ್ಲಿ ಸತ್ಯನಾರಾಯಣ ಹೆಂಡ್ತಿಯ ಸಹೋದರನ ಮಗಳಾಗಿದ್ದಾರೆ. ವಿಜಯ್ಕುಮಾರ್ ಮತ್ತು ಪ್ರಿಯಾಮಣಿ ದಂಪತಿಗೆ ಒಬ್ಬ ಮಗನಿದ್ದಾನೆ. ಸುಖವಾಗಿ ನಡೆಯುತ್ತಿದ್ದ ಸಂಸಾರದಲ್ಲಿ ವಿಜಯ್ಕುಮಾರ್ ಕೆಲಸದ ನಿಮಿತ್ತವಾಗಿ ಕತಾರ್ಗೆ ತೆರಳಬೇಕಾಯಿತು. ಪ್ರಿಯಾಮಣಿ ತಾಯಿ ಅಂಡಮಾನ್ನಲ್ಲಿ ನೆಲೆಸಿದ್ದಾರೆ.
ಮನೆಯಲ್ಲಿ ಸತ್ಯನಾರಾಯಣ, ಪ್ರಿಯಾಮಣಿ ಮತ್ತು ಆಕೆಯ ಮಗ ವಾಸಿಸುತ್ತಿದ್ದರು. ಮನೆಯಲ್ಲಿ ಒಂಟಿಯಾಗಿದ್ದ ಪ್ರಿಯಾಮಣಿಗೆ ಯುವಕನೊಬ್ಬನ ಪರಿಚಯವಾಗಿದೆ. ಬಳಿಕ ಇವರ ಪರಿಚಯದಿಂದಾಗಿ ಪ್ರಿಯಾ ಜೊತೆ ಆ ಯುವಕ ಬಹಳ ಸಲುಗೆಯಿಂದಿರುತ್ತಿದ್ದ. ಇಬ್ಬರು ಪ್ರೀತಿಯಲ್ಲಿದ್ದರು ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಈ ತಿಂಗಳು 22 ರಂದು ಪ್ರಿಯಾಮಣಿ ಆ ಯುವಕನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಸೊಸೆ ಪ್ರಿಯಾಮಣಿ ನಾಪತ್ತೆಯಾಗಿದ್ದಾಳೆ ಎಂದು ಮಾವ ಸತ್ಯನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಪೊಲೀಸರು ಅವರಿಬ್ಬರನ್ನು ಹುಡುಕಿ ವಾಪಸ್ ಕರೆಸಿ ಕೌನ್ಸಿಲಿಂಗ್ ಬಳಿಕ ಕುಟುಂಬಸ್ಥರಿಗೆ ಒಪ್ಪಿಸಿದ್ದರು. ಮಗಳ ಪುರಾಣ ಕೇಳಿದ ಪ್ರಿಯಾಮಣಿ ತಾಯಿ ಅಂಡಮಾನ್ನಿಂದ ಮೆಡಿಚರ್ಲಪಾಲೆಂಗೆ ಬಂದಿದ್ದಾರೆ. ನಿನ್ನೆ ಮನೆಯಲ್ಲಿ ಮಾವ ಮತ್ತು ಸೊಸೆಯ ನಡುವೆ ಜಗಳವಾಗಿದೆ. ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿದ್ದು, ಮಾವ ಸತ್ಯನಾರಾಯಣ ಸೊಸೆ ಪ್ರಿಯಾಮಣಿಗೆ ಚಾಕುವಿನಿಂದ ಹಲವಾರು ಬಾರಿ ಚುಚ್ಚಿ ಕೊಲೆ ಮಾಡಿದ್ದಾರೆ. ಬಚಾವ್ ಮಾಡಲು ಬಂದ ಪ್ರಿಯಾಮಣಿ ತಾಯಿಗೂ ಸತ್ಯನಾರಾಯಣ ಚಾಕುವಿನಿಂದ ಹಲ್ಲೆಗೊಳಿಸಿದ್ದಾರೆ.
ಕೊಲೆ ಮಾಡಿದ ಬಳಿಕ ಸತ್ಯನಾರಾಯಣ ನೇರ ಪೊಲೀಸ್ ಠಾಣೆಗೆ ತೆರಳಿ ಶರಣಾದರು. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.