ಪತ್ತನಂತಿಟ್ಟ(ಕೇರಳ): ತಾನೇ ಜನ್ಮ ಕೊಟ್ಟ ವಿಕಲಚೇತನಳಾದ ಮಗಳ ಮೇಲೆ ತಂದೆಯೊಬ್ಬ ಅತ್ಯಾಚಾರ ಎಸಗಿ ರಾಕ್ಷಸಿ ಕೃತ್ಯ ಮೆರೆದಿದ್ದ. ಈ ಪ್ರಕರಣದಲ್ಲಿ ಕೇರಳದ ಪೋಕ್ಸೋ ನ್ಯಾಯಾಲಯ 107 ವರ್ಷಗಳ ಕಠಿಣ ಜೈಲು ಶಿಕ್ಷೆ, 4 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ದಂಡದ ಹಣ ಕಟ್ಟಲು ತಪ್ಪಿದಲ್ಲಿ ಐದು ವರ್ಷಗಳ ಹೆಚ್ಚುವರಿ ಜೈಲು ಶಿಕ್ಷೆ ನೀಡಲು ಸೂಚಿಸಿದೆ.
ಪ್ರಕರಣವೇನು?: ಕೇರಳದ ಪತ್ತನಂತಿಟ್ಟ ಜಿಲ್ಲೆಯ ಗ್ರಾಮವೊಂದರಲ್ಲಿ 13 ವರ್ಷದ ವಿಕಲಚೇತನ ಬಾಲಕಿ ಮತ್ತು ತಂದೆ ವಾಸವಾಗಿದ್ದರು. ಪತ್ನಿ ಪತಿಯಿಂದ ದೂರವಾಗಿದ್ದರು. ಇದನ್ನೇ ನೆಪವಾಗಿಟ್ಟುಕೊಂಡ ಪಾಪಿ ಅಸಹಾಯಕ ಸ್ಥಿತಿಯಲ್ಲಿದ್ದ ಮಗಳ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.
ಕ್ರೂರಿ ತಂದೆ ಮಗಳ ಖಾಸಗಿ ಅಂಗದಲ್ಲಿ ಕಬ್ಬಿಣದ ರಾಡ್ ತುರುಕಿ ಕ್ರೌರ್ಯ ಮೆರೆದಿದ್ದ. ಇದರಿಂದ ಮಗಳು ತಪ್ಪಿಸಿಕೊಂಡು ಪಕ್ಕದ ಮನೆಗೆ ಹೋಗಿದ್ದಳು. ಬಳಿಕ ಶಾಲೆಯಲ್ಲಿ ಅಳುತ್ತ ಕೂತಿದ್ದಾಗ ಶಿಕ್ಷಕರು ವಿಚಾರಿಸಿದ್ದಾರೆ.
ಈ ವೇಳೆ ಸಂತ್ರಸ್ತೆ ತನ್ನ ತಂದೆಯ ಕ್ರೌರ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ಬಳಿಕ ಶಿಕ್ಷಕರು ಚೈಲ್ಡ್ ಲೈನ್ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ಆರೋಪಿ ವಿರುದ್ಧ 2020 ರಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮಗಳನ್ನೇ ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡ ತಂದೆಯ ವಿರುದ್ಧ ಪ್ರಾಸಿಕ್ಯೂಷನ್ ಅತ್ಯಾಚಾರ ಆರೋಪ ಮಾಡಿದ್ದನ್ನು ನ್ಯಾಯಾಲಯ ಎತ್ತಿಹಿಡಿದು, ಪೋಕ್ಸೋ ಕಾಯ್ದೆಯನುಸಾರ ದೋಷಿ ಎಂದು ತೀರ್ಪು ನೀಡಿದೆ. 107 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಮತ್ತು 4 ಲಕ್ಷ ರೂಪಾಯಿ ದಂಡ ವಿಧಿಸಿದೆ. ದಂಡದ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಕೋರ್ಟ್ ಸೂಚಿಸಿದೆ.
ಓದಿ: ಕೀಟನಾಶಕ ಮಿಶ್ರಿತ ನೀರು ಸೇವನೆ.. ಮಕ್ಕಳು ಸೇರಿ 15 ಮಂದಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು