ಕಾಶ್ಮೀರ : ಎನ್ಸಿಪಿ ಅಧ್ಯಕ್ಷ ಮತ್ತು ಸಂಸದ ಡಾ.ಫಾರೂಕ್ ಅಬ್ದುಲ್ಲಾ ಅವರು ಕಾಶ್ಮೀರ ಕಣಿವೆಯಲ್ಲಿ ಲಕ್ಷಾಂತರ ರೋಗಿಗಳ ಚಿಕಿತ್ಸೆಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಶ್ರೀನಗರದ ವಿವಿಧ ಆಸ್ಪತ್ರೆಗಳಿಗೆ ಅವರ ಎಂಪಿಎಲ್‌ಎಡಿ ನಿಧಿಯಿಂದ ಒಂದು ಕೋಟಿ ಮತ್ತು 40 ಲಕ್ಷ ರೂ. ಹಣವನ್ನ ನೀಡಿದ್ದಾರೆ.
ಜಿಲ್ಲಾ ಅಭಿವೃದ್ಧಿ ಆಯುಕ್ತ ಶ್ರೀನಗರ ಮುಹಮ್ಮದ್ ಇಜಾಜ್ ಅಸಾದ್ ಅವರಿಗೆ ಬರೆದ ಪತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಡಾ.ಫಾರೂಕ್ ಅಬ್ದುಲ್ಲಾ, ತಮ್ಮ ಕ್ಷೇತ್ರದ ವಿವಿಧ ಆಸ್ಪತ್ರೆಗಳಲ್ಲಿನ ರೋಗಿಗಳ ಉತ್ತಮ ವೈದ್ಯಕೀಯ ಅಗತ್ಯಗಳಿಗಾಗಿ ಈ ಮೊತ್ತವನ್ನು ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಕೊರೊನಾ ಸಾಂಕ್ರಾಮಿಕವು ಭಯಾನಕ ರೂಪ ಪಡೆದುಕೊಂಡಿದೆ ಎಂದು ಫಾರೂಕ್ ಅಬ್ದುಲ್ಲಾ ಪತ್ರದಲ್ಲಿ ಬರೆದಿದ್ದಾರೆ. ಕಾಶ್ಮೀರದಲ್ಲಿ ಕೋವಿಡ್ ರೋಗಿಗಳ ಮರಣ ಸಂಖ್ಯೆ ಸಹ ಹೆಚ್ಚುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ಇಂತಹ ಆತಂಕಕಾರಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಎಂ-ಫಂಡ್‌ನಿಂದ ಸಂಗ್ರಹಿಸಿದ ಹಣವನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಮತ್ತು ಆಸ್ಪತ್ರೆಗಳ ಸೌಲಭ್ಯಗಳಿಗೆ ಬಳಸಿಕೊಳ್ಳಿ ಎಂದು ಬರೆದಿದ್ದಾರೆ.
ಬಿಡುಗಡೆಯಾದ ಮೊತ್ತದಲ್ಲಿ 50 ಲಕ್ಷ ರೂ.ಗಳನ್ನು ಆರೋಗ್ಯ ಸೇವೆಗಳ ನಿರ್ದೇಶಕರಿಗೆ ಮೀಸಲಿಡಲಾಗಿದ್ದು, ಎಸ್‌ಎಂಹೆಚ್‌ಎಸ್ ಆಸ್ಪತ್ರೆ ಶ್ರೀನಗರ, ಸಿಡಿ ಆಸ್ಪತ್ರೆ ಮತ್ತು ಸ್ಕಿಮ್ಸ್ ಮೆಡಿಕಲ್ ಕಾಲೇಜು ಶ್ರೀನಗರಕ್ಕೆ ಕ್ರಮವಾಗಿ 30 ಲಕ್ಷ ರೂ. ನೀಡಲಾಗಿದೆ.