ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ನಾಳೆ ಕೃಷಿ ಸಂಘಟನೆಗಳು ದೇಶಾದ್ಯಂತ ರೈಲು ರೋಕೊ ಚಳವಳಿಗೆ ಕರೆ ನೀಡಿದ್ದು, ನಾಲ್ಕು ಗಂಟೆಗಳ ಕಾಲ ದೇಶಾದ್ಯಂತ ರೈಲು ತಡೆದು ಅನ್ನದಾತರು ಪ್ರತಿಭಟನೆ ನಡೆಸಲಿದ್ದಾರೆ.
ಓದಿ: 100ರ ಗಡಿ ದಾಟಿದ ಪೆಟ್ರೋಲ್... ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸಿ, ನಮೋ ಹೇಳಿದ್ದೇನು!?
ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಈ ಚಳವಳಿಗೆ ಕರೆ ನೀಡಿದ್ದು, ವಿವಿಧ ರೈತ ಸಂಘಟನೆಗಳು ಇದರಲ್ಲಿ ಭಾಗಿಯಾಗಲಿವೆ. ಇನ್ನು ಕರ್ನಾಟಕದಲ್ಲೂ ರಾಜ್ಯ ಕಬ್ಬು ಬೆಳಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈಲು ತಡೆ ಚಳವಳಿ ನಡೆಯಲಿದೆ.
ಕಳೆದ ಕೆಲ ದಿನಗಳ ಹಿಂದೆ ಈ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ರೈಲು ತಡೆ ಚಳವಳಿಗೆ ಕರೆ ನೀಡಲಾಗಿದ್ದು, ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ರವರೆಗೆ ಈ ಬಂದ್ ಇರಲಿದೆ. ಹೀಗಾಗಿ ಕೆಲವೊಂದು ರೈಲು ಸೇವೆ ಬಂದ್ ಆಗಬಹುದು ಎಂದು ರೈಲ್ವೆ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ.