ನವದೆಹಲಿ: ಮೂರು ಪ್ರಮುಖ ಕೃಷಿ ಕಾಯ್ದೆಗಳನ್ನು ರದ್ದು (Farm Laws Repeal) ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಆದ್ರೂ ಸಹ ಸದ್ಯದ ಮಟ್ಟಿಗೆ ಹೋರಾಟ ನಿಲ್ಲಿಸದೇ ಇರಲು ಸಂಯುಕ್ತ ಕಿಸಾನ್ ಮೋರ್ಚಾ (Samyukt Kisan Morcha) ನಿರ್ಧರಿಸಿದೆ. ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿರುವ ಮೋರ್ಚಾ, 6 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿವೆ.
ಇಂದು ಈ ಸಂಬಂಧ ಲಖನೌದಲ್ಲಿ ಮಹಾಪಂಚಾಯತ್ ಕೂಡಾ ನಡೆಯಲಿದೆ. ಈ ಮಹಾಪಂಚಾಯತ್ನಲ್ಲಿ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿರುವ ರೈತ ಸಂಘಟನೆಗಳು, ಪರಿಸ್ಥಿತಿ ಆಧರಿಸಿ ಮುಂದಿನ ನಿರ್ಣಯ ಕೈಗೊಳ್ಳಲು ನ.27ರಂದು ಮತ್ತೊಂದು ಸಭೆ ಕರೆಯಲೂ ಅದು ತೀರ್ಮಾನಿಸಿವೆ.
ಆದರೆ, ಸೋಮವಾರದ ಲಖನೌ ಕಿಸಾನ್ ಮಹಾ ಪಂಚಾಯತ್ 26ರಂದು ದಿಲ್ಲಿ ಗಡಿಗಳಲ್ಲಿ ರೈತ ಹೋರಾಟ ವಾರ್ಷಿಕೋತ್ಸವ ಹಾಗೂ ನ.29ರಂದು ಸಂಸತ್ತಿಗೆ ಟ್ರ್ಯಾಕ್ಟರ್ ಪರೇಡ್ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಸಾನ್ ಮೋರ್ಚಾ ಮುಖಂಡ ಬಲಬೀರ್ ಸಿಂಗ್ ರಾಜೇವಾಲ್, ಪ್ರಧಾನಿ ಮೋದಿ ಅವರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಆದರೆ, ಇದಕ್ಕೆ ಸಂಸತ್ತು ಅಂತಿಮ ಹಾಡಬೇಕು. ಅದಕ್ಕಾಗಿ ಸದ್ಯದ ಮಟ್ಟಿಗೆ ನಮ್ಮ ಹೋರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂದು ಲಖನೌ ಕಿಸಾನ್ ಮಹಾಪಂಚಾಯತ್, 26ರಂದು ದಿಲ್ಲಿ ಗಡಿಗಳಲ್ಲಿ ರೈತ ಹೋರಾಟ ವಾರ್ಷಿಕೋತ್ಸವ ಹಾಗೂ ನ.29ರಂದು ಸಂಸತ್ತಿಗೆ ಟ್ರಾಕ್ಟರ್ ರ‍್ಯಾಲಿ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ನು ಕನಿಷ್ಠ ಬೆಂಬಲ ಬೆಲೆ (MSP) ನಿಗದಿಗೆ ಕಾಯ್ದೆ ಸಿದ್ಧಪಡಿಸಬೇಕು. ನೀರಾವರಿ ರೈತರಿಗೆ ಭಾರ ಆಗಿರುವ ವಿದ್ಯುತ್ ಕಾಯ್ದೆ-2020ನ್ನು ವಾಪಸು ಪಡೆಯಬೇಕು ಹಾಗೂ ರೈತರ ಮೇಲೆ ದೌರ್ಜನ್ಯ ಎಸಗಿದೆ ಆರೋಪ ಹೊತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು’ ಎಂದೂ ರಾಜೇವಲ್ ಹೇಳಿದರು.
ಬುಧವಾರ ಕೃಷಿ ಕಾಯ್ದೆ ರದ್ದತಿಗೆ ಸಂಪುಟ ಅಸ್ತು..!
ಶುಕ್ರವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಕುರಿತು ತಿಳಿಸಿದ್ದರು. ರದ್ದತಿಯ ಪ್ರಕ್ರಿಯೆಗಳು ಬುಧವಾರ ಆರಂಭವಾಗುವ ಸಾಧ್ಯತೆ ಇದೆ. ಅಂದು ಸಂಪುಟ ಸಭೆಯಲ್ಲಿ ಮೋದಿ ಘೋಷಣೆಗೆ ಮೊಹರು ಒತ್ತಲಾಗುವುದು. ನಂತರ, ಕಾಯ್ದೆ ರದ್ದು ಮಾಡುವ ಮಸೂದೆಗಳನ್ನು ನ.29ರಂದು ಆರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.