ಘಾಜಿಯಾಬಾದ್: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಬಿಜೆಪಿಗೆ ಮತ ನೀಡಬೇಡಿ ಎಂದು ಜನರಲ್ಲಿ ಮನವಿ ಮಾಡುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಕೇಂದ್ರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ರಾಜಕೀಯ ರಹಿತವಾಗಿದೆ. ಯುಪಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಸ್ಪರ್ಧೆಗಳಿಸುವ ಯೋಚನೆ ಇಲ್ಲ. ಬದಲಾಗಿ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಗಮನ ಹರಿಸುತ್ತೇವೆ. ನಮ್ಮ ಸಂಘಟನೆಗೆ ಚುನಾವಣೆಯಲ್ಲಿ ಆಸಕ್ತಿ ಇಲ್ಲ. ಆದರೆ ಕಳೆದ 8 ತಿಂಗಳಿನಿಂದ ನಾವು ರಸ್ತೆ ಮೇಲೆ ಇರುವುದರಿಂದ ಬಿಜೆಪಿ ಪಕ್ಷಕ್ಕೆ ಮತ ನೀಡಬೇಡಿ ಎಂದು ಖಂಡಿತವಾಗಿ ಜನರಲ್ಲಿ ಮನವಿ ಮಾಡುತ್ತೇವೆ ಎಂದಿದ್ದಾರೆ.
ಹೋರಾಟದಿಂದ ರೈತರ ಸ್ಥಿತಿ ಸುಧಾರಿಸುತ್ತಿದೆಯೇ ಹೊರತು ಚುನಾವಣೆಯಿಂದಲ್ಲ. ಶೇಕಡಾ 60 ರಷ್ಟು ಸಂಸದರು ಕೃಷಿ ಹಿನ್ನಲೆಯಿಂದ ಬಂದವರಾಗಿದ್ದಾರೆ. ಎಲೆಕ್ಷನ್‌ನಲ್ಲಿ ಗೆದ್ದ ಬಳಿಕ ರೈತರ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತುತ್ತಿಲ್ಲ. ಪಕ್ಷದ ಮಾರ್ಗ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಟಿಕಾಯತ್ ಆರೋಪಿಸಿದರು.
ಮಿಷನ್ ಯುಪಿಗೆ ಉತ್ತೇಜನ ನೀಡಲು, ಬಿಕೆಯುನ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯು ಉತ್ತರ ಪ್ರದೇಶದ ಎಲ್ಲಾ ಮಂಡಲ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಮಹಿಳಾ ಅಧ್ಯಕ್ಷರನ್ನು ತೆಗೆದುಹಾಕಲು ನಿರ್ಧರಿಸಿದೆ. ಶೀಘ್ರದಲ್ಲೇ ಹೊಸ ಕಾರ್ಯಕಾರಿ ಮಂಡಳಿಯನ್ನು ರಚಿಸಲಾಗುವುದು ಎಂದು ಹೇಳಿದರು. ಅಲ್ಲಿ ಹೋರಾಟಕ್ಕೆ ಮತ್ತಷ್ಟು ಸಹಕರಿಸಬಹುದಾದ ಹೊಸ ಮುಖಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.