ಪಂಜಾಬ್/ ಲೂದಿಯಾನ : ಮಾರುಕಟ್ಟೆಯಲ್ಲಿ ರಾಶಿ ಹಾಕಿರೋ ಕೆಂಪು ಕೆಂಪಾದ ಸ್ಟ್ರಾಬೆರಿ ನೋಡಿದ್ರೆ, ಎಂತಹವರು ಸಹ ಬಾಯಿ ಚಪ್ಪರಿಸಿಕೊಳ್ತಾರೆ. ಇಂತಹ ಸ್ಟ್ರಾಬೆರಿ ದೇಶದ ನಾನಾ ಭಾಗಗಳಲ್ಲಿ ಬೆಳೆಯಲಾಗುತ್ತೆ. ಆದ್ರೆ, ಪಂಜಾಬ್ನ ರೈತರೊಬ್ಬರು ವಿಭಿನ್ನವಾಗಿ ಸ್ಟ್ರಾಬೆರಿ ಬೆಳೆದಿದ್ದು, ತಮ್ಮ ವಿನೂತನ ಕೃಷಿಯಿಂದಲೇ ಹೆಸರಾಗಿದ್ದಾರೆ.
ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿತವಾಗುತ್ತಿರುವುದರಿಂದ ಭತ್ತ ಹಾಗೂ ಗೋಧಿ ಬೆಳೆಗಾರರು ಆತಂಕಕ್ಕೆ ಸಿಲುಕಿದ್ದಾರೆ. ಈ ನಡುವೆ, ಸಾವಯುವ ಕೃಷಿಯಿಂದ ಸ್ಟ್ರಾಬೆರಿ ಸೇರಿದಂತೆ ಬಣ್ಣ ಬಣ್ಣದ ಎಲೆಕೋಸು ಬೆಳೆದು ರೈತನೊಬ್ಬ ಮಾದರಿಯಾಗಿದ್ದಾನೆ. ಕುಹಾದ ಪ್ರಾಂತ್ಯದ ನಾಮ್ದಾರಿ ಹರ್ದೇವ್ ಸಿಂಗ್ ಸಾವಯುವ ಕೃಷಿ ಮೂಲಕ ಲಾಭ ಕಂಡುಕೊಂಡಿದ್ದಾರೆ.
ಹರ್ದೇವ್ ಸಿಂಗ್ ಬರೀ ಸ್ಟ್ರಾಬೆರಿ ಮಾತ್ರವಲ್ಲ ಹಳದಿ ಮತ್ತು ನೇರಳೆ ಬಣ್ಣದ ಎಲೆಕೋಸು ಸಹ ಬೆಳೆದಿದ್ದಾರೆ. ಮಿಶ್ರ ಬೆಳೆಯಿಂದ ಹೆಚ್ಚು ಲಾಭ ಪಡೆಯಬಹುದು ಎಂದು ನಂಬಿರುವ ಹರ್ದೇವ್ ಬಣ್ಣ ಬಣ್ಣದ ಎಲೆಕೋಸು ಬೆಳೆದು ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಹರ್ದೇವ್ ಪಂಜಾಬ್ ಕಷಿ ವಿಶ್ವವಿದ್ಯಾಲಯದಿಂದ ತರಬೇತಿ ಪಡೆದು ಸೈ ಎನಿಸಿಕೊಂಡಿದ್ದಾರೆ.
ಸದ್ಯ ಹರ್ದೇವ್ ಸಿಂಗ್ ಬೆಳೆದಿರುವ ಲೂಧಿಯಾನ ಸ್ಟ್ರಾಬೆರಿಯು ಪಂಜಾಬ್ ಮತ್ತು ಛತ್ತೀಸ್ಗಡದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಇಷ್ಟೇ ಅಲ್ಲ, ಸ್ಟ್ರಾಬೆರಿಯ ಜೊತೆ ಜೊತೆಗೆ ವಿವಿಧ ರೀತಿಯ ಹಣ್ಣುಗಳನ್ನ ಬೆಳೆದಿದ್ದು, ಮಾರುಕಟ್ಟೆಗೂ ಸಾಗಿಸಿ ಲಾಭಗಳಿಸಿದ್ದಾರೆ.
ಇತ್ತ ಸಾವಯವ ಕೃಷಿ ಮೂಲಕ ಬೆಳೆದಿರುವ ಹರ್ದೇವ್ ಸ್ಟ್ರಾಬೆರಿ ಕೊಳ್ಳಲೆಂದೇ ದೂರದೂರಿನಿಂದಲೂ ಜನರು ಬರುತ್ತಾರೆ. ಇಲ್ಲಿ ಅವರಿಷ್ಟದ ಸ್ಟ್ರಾಬೆರಿಯನ್ನ ಅವರೇ ಆಯ್ದುಕೊಂಡು, ಖುಷಿಯಿಂದ ತೆರಳುತ್ತಾರೆ. ನೀರು ಹಾಗೂ ಜಾಗದ ಕೊರತೆಯಿಂದ ಕೃಷಿಕರು ಉತ್ತಮ ಫಸಲು ಪಡೆಯುವಲ್ಲಿ ವಿಫಲರಾಗುವ ಉದಾಹರಣೆಯ ನಡುವೆ, ಪಂಜಾಬ್ನ ಹರ್ದೇವ್ ಸಿಂಗ್ ಸ್ಪಲ್ಪವೇ ಜಾಗದಲ್ಲಿ ಬರೋಬ್ಬರಿ 24ಕ್ಕೂ ಅಧಿಕ ರೀತಿಯ ತರಕಾರಿ ಬೆಳೆಯುತ್ತಾರೆ. ಅಲ್ಲದೆ ನೇರಳೆ ಮತ್ತು ಹಳದಿ ಬಣ್ಣದ ಎಲೆಕೋಸು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.