ಬಾರ್ಮರ್(ರಾಜಸ್ಥಾನ) : ಮದುವೆ ಎಂದರೆ ಸಂಭ್ರಮ. ಅದರಲ್ಲೂ ಮದುವೆ ದಿಬ್ಬಣ ಎಂದರೆ ಇನ್ನೂ ಸಂಭ್ರಮ. ಐಷಾರಾಮಿ ವಾಹನಗಳು, ಕುದುರೆ - ಬಂಡಿಗಳ ಮೇಲೆ ಜನರು ಮೆರವಣಿಗೆ ನಡೆಸುತ್ತಿರುವ ಇಂದಿನ ಕಾಲದಲ್ಲಿ ಬಾರ್ಮರ್‌ನಲ್ಲಿ ರೈತನ ಮಗನ ಮದುವೆಯ ಮೆರವಣಿಗೆಯನ್ನು ಐಷಾರಾಮಿ ಕಾರುಗಳ ಬದಲು 51 ಟ್ರ್ಯಾಕ್ಟರ್‌ಗಳಲ್ಲಿ ನಡೆಸಲಾಗಿದೆ. ಅದರಲ್ಲೂ ವಿಶೇಷವೆಂದರೆ ಸ್ವತಃ ವರನೇ ಟ್ರ್ಯಾಕ್ಟರ್ ಓಡಿಸಿಕೊಂಡು ಅತ್ತೆ ಮನೆಗೆ ಕಾಲಿಟ್ಟಿದ್ದಾನೆ.
ಹಿಂದೆ ಎಲ್ಲ ಸಂಪನ್ಮೂಲ ಕೊರತೆಯಿಂದ ಎತ್ತಿನ ಗಾಡಿ, ಒಂಟೆಗಳ ಮೇಲೆ ಮೆರವಣಿಗೆ ನಡೆಯುತ್ತಿತ್ತು. ಕಾಲ ಕಳೆದಂತೆ ಜನರಲ್ಲಿ ಐಷಾರಾಮಿ ವಾಹನಗಳ ವ್ಯಾಮೋಹ ಹೆಚ್ಚಾಗಿ, ಐಷಾರಾಮಿ ಕಾರುಗಳಲ್ಲದೇ ವರ ಹೆಲಿಕಾಪ್ಟರ್ನಲ್ಲಿ ಬಂದಿಳಿದ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇವೆ.
ಆದರೆ, ಬಾರ್ಮರ್‌ನಲ್ಲಿ ವಿಭಿನ್ನವಾಗಿ ವರ ತನ್ನ ವಧುವನ್ನು ವರಿಸಲು ಟ್ರ್ಯಾಕ್ಟರ್‌ನಲ್ಲಿ ಬಂದಿಳಿದಿದ್ದಾನೆ. ಸುಮಾರು 51 ಟ್ರ್ಯಾಕ್ಟರ್‌ಗಳು ಸಾಲಾಗಿ ಒಂದು ಕಿ.ಮೀ ಮೆರವಣಿಗೆ ಬರುವುದನ್ನು ನೋಡಲು ಊರಿನ ಉದ್ದಕ್ಕೂ ಜನ ನಿಂತಿದ್ದರು. ಈ ಮೆರವಣಿಗೆಯೇ ಊರಿನವರಿಗೆ ಜಾತ್ರೆಯಂತಾಗಿತ್ತು. ಈ ವಿಶಿಷ್ಟ ಮದುವೆ ಚರ್ಚೆಗೂ ಗ್ರಾಸವಾಗಿದೆ.
ಜಿಲ್ಲೆಯ ರೈತ ಸೋನಾರಾಮ್ ತಮ್ಮ ಪುತ್ರ ರಾಧೇಶ್ಯಾಮ್ ಅವರನ್ನು ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಿದ್ದು, ಮದುವೆ ದಿಬ್ಬಣ ಇಂದು ಎಲ್ಲೆಡೆ ಚರ್ಚೆಯಾಗುತ್ತಿದೆ. 51 ಟ್ರ್ಯಾಕ್ಟರ್‌ಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಜಿಲ್ಲೆಯ ಬೈಟು ಉಪವಿಭಾಗ ಸೇವನಿಯಾಲ ಗ್ರಾಮದ ನಿವಾಸಿ ಸೋನಾರಾಮ್ ಪುತ್ರ 22 ವರ್ಷದ ರಾಧೇಶ್ಯಾಮ್, ಬೋಡ್ವಾ ನಿವಾಸಿ ಮಲಾರಾಮ್ ಮಗಳು ಕಮಲಾ ಅವರೊಂದಿಗೆ ಜೂನ್ 8 ರಂದು ವಿವಾಹವಾಗಿದ್ದರು.
ಊರಲ್ಲಿ ಯಾರದ್ದಾದ್ದರೂ ಮದುವೆಯಾದಾಗ ಒಂಟೆಗಳ ಮೇಲೆ ಮೆರವಣಿಗೆ ಸಾಗುತ್ತಿತ್ತು.. ಮಗನ ಮೆರವಣಿಗೆಯೂ ಒಂಟೆಯ ಮೇಲೆ ಹೋಗಬೇಕು ಎಂಬ ಆಸೆಯಿತ್ತು. ಆದರೆ, ಇಂದಿನ ದಿನಗಳಲ್ಲಿ ಇಷ್ಟೊಂದು ಒಂಟೆಗಳು ಸಿಗುವುದು ಕಷ್ಟ. ಹಾಗಾಗಿ ರೈತನ ಗುರುತಾಗಿರುವ ಟ್ರ್ಯಾಕ್ಟರ್‌ನಲ್ಲಿ ಮಗನ ಮದುವೆಯ ಮೆರವಣಿಗೆ ಮಾಡಿದೆವು ಎಂದು ರೈತ ಸೋನಾರಾಮ್ ಹೇಳಿದ್ದಾರೆ.
ನನ್ನ ಮದುವೆ ಮೆರವಣಿಗೆ ಟ್ರ್ಯಾಕ್ಟರ್‌ನಲ್ಲಿ ನಡೆಯುತ್ತದೆ ಎಂದು ನಾನು ಯಾವುತ್ತೂ ಊಹಿಸಿರಲಿಲ್ಲ. ಆದರೆ, ನನ್ನ ತಂದೆ ಆಸೆ ಪಟ್ಟಾಗ ನಾನೂ ಅದಕ್ಕೆ ಒಪ್ಪಿದೆ. 51 ಟ್ರ್ಯಾಕ್ಟರ್‌ಗಳಲ್ಲಿ ನನ್ನ ಮೆರವಣಿಗೆ ನಡೆದಿರುವುದು ಸಂತಸ ತಂದಿದೆ. ಕೇವಲ 30 ಟ್ರ್ಯಾಕ್ಟರ್‌ಗಳು ಮಾತ್ರ ಮನೆ ಮತ್ತು ನಮ್ಮ ಕುಟುಂಬದ ಸದಸ್ಯರ ಬಳಿ ಇತ್ತು. ಉಳಿದ ಟ್ರ್ಯಾಕ್ಟರ್ಗಳನ್ನು ಗ್ರಾಮದ ಕೆಲವರು ತಂದಿದ್ದರು. 51 ಟ್ರ್ಯಾಕ್ಟರ್‌ಗಳಲ್ಲಿ ಸುಮಾರು 150 ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ವರ ರಾಧೇಶ್ಯಾಮ್ ಹೇಳಿದರು.
ಇದನ್ನೂ ಓದಿ : ಉತ್ತರಪ್ರದೇಶ ರೈತನ ತೋಟದಲ್ಲಿವೆ ವಿಶ್ವದ ಎಲ್ಲ ತಳಿಯ ಮಾವು: ಒಂದೊಂದು ಹಣ್ಣು ವಿಶೇಷ