ಪಾಲಿ(ರಾಜಸ್ತಾನ): ಆತ ಓದಿದ್ದು ಕೇವಲ 7ನೇ ತರಗತಿ. ಸಾಂಪ್ರದಾಯಿಕ ಬೆಳೆಗಳಾದ ಗೋಧಿ, ಜೋಳ, ಎಳ್ಳು ತನ್ನ ಕೈ ಹಿಡಿಯಲಿಲ್ಲ. ಇವುಗಳನ್ನು ಬಿಟ್ಟು ಹೊಸ ಚಿಂತನೆ ಬೆಳೆಸಿಕೊಂಡ ರೈತ ಇದೀಗ ವರ್ಷಕ್ಕೆ 8 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾನೆ. ಇದಕ್ಕೆ ನೀರೆರೆದಿದ್ದೇ ತಂತ್ರಜ್ಞಾನ.
ಹೌದು, ರಾಜಸ್ತಾನದ ಪಾಲಿಯ ತೊಲರಾಮ್ ಘಾಂಚಿ ಎಂಬ ರೈತ. ಯೂಟ್ಯೂಬ್ನ ಸಹಾಯದಿಂದ ಕೃಷಿ ಕ್ಷೇತ್ರದಲ್ಲಿ ಮಾದರಿಯಾಗಿ ಬೆಳೆದು ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ. ಜಮೀನಿನಲ್ಲಿಯೇ ಸೌರ ಸ್ಥಾವರ ಅಳವಡಿಸಿಕೊಂಡು ಮತ್ತು ತೋಟಗಾರಿಕಾ ಬೆಳೆಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ.
ತೋಟಗಾರಿಕೆಯಿಂದ ಹಸಿರಾದ ಬದುಕು: ರೈತ ತೊಲರಾಮ್ ಅವರು ಸಾಂಪ್ರದಾಯಿಕ ಬೆಳೆಗಳಾದ ಜೋಳ, ಎಳ್ಳು, ಗೋಧಿ ಕೃಷಿಯಿಂದ ಹಿಂದೆ ಸರಿದು ತೋಟಗಾರಿಕೆಯತ್ತ ಚಿತ್ತ ಹರಿಸಿದರು. ಪೇರಲ, ಪಪ್ಪಾಯಿ, ಗುಲಾಬಿ, ಬಾಳೆ ಮತ್ತು ಅಂಜೂರದ ಗಿಡಗಳನ್ನು ನೆಟ್ಟು ಯಶಸ್ಸು ಪಡೆದಿದ್ದಾರೆ. ವಿಶೇಷ ಅಂದರೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನು ಸಂಪಾದಿಸುತ್ತಿದ್ದಾರೆ. 3,500 ಗುಲಾಬಿ ಗಿಡಗಳು, 200 ಪೇರಲ, 150 ಪಪ್ಪಾಯಿ, 125 ಬಾಳೆ, 7 ಅಂಜೂರ ಮತ್ತು 5 ಮಾವಿನ ಗಿಡಗಳನ್ನು ನೆಟ್ಟಿದ್ದಾರೆ.
ಯೂಟ್ಯೂಬ್ ನೋಡಿ ಕೃಷಿ: ಇನ್ನು ತೋಟಗಾರಿಕಾ ಕೃಷಿ ಮಾಡಲು ಸಹಾಯ ಮಾಡಿದ್ದೇ ಅಂತರ್ಜಾಲ. ಯೂಟ್ಯೂಬ್ನಲ್ಲಿ ಗುಲಾಬಿಯನ್ನು ಬೆಳೆಯುವುದು ಹೇಗೆಂದು ಮಾಹಿತಿ ಪಡೆದಿದ್ದಾರೆ. ಬಳಿಕ ಬೇರೊಬ್ಬ ರೈತ ಕೂಡ ಗುಲಾಬಿ ಬೆಳೆದಿದ್ದನ್ನು ಕಂಡು ಅವರಿಂದ ಹೆಚ್ಚಿನ ಮಾಹಿತಿ ಪಡೆದು ಭೂಮಿ, ವಾಯು ಪರಿಸರಕ್ಕೆ ಅನುಗುಣವಾಗಿ ಗುಲಾಬಿ ನೆಟ್ಟಿದ್ದಾರೆ. ಭೂಮಿಯನ್ನು ಉಳುಮೆ ಮಾಡಿದ ನಂತರ ನರ್ಸರಿಯಿಂದ 2 ಸಾವಿರ ದೇಶೀಯ ಗುಲಾಬಿಗಳ ಗಿಡಗಳನ್ನು ತಂದು ನೆಟ್ಟರು.
ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೇರಲ ಬೆಳೆಯ ಬಗ್ಗೆ ಮಾಹಿತಿ ಸಿಕ್ಕಿತು. 10 ಕೆಂಪು ಪೇರಲ ಗಿಡಗಳನ್ನು ಜಮೀನಿನಲ್ಲಿ ನೆಟ್ಟಿದ್ದೇನೆ. ವರ್ಷದಲ್ಲಿಯೇ ಅವು ಉತ್ತಮವಾಗಿ ಬೆಳೆದು ಪೇರಲ ಹಣ್ಣಿನಿಂದ ತುಂಬಿದ್ದವು. ಇದರಿಂದ ಸ್ಫೂರ್ತಿ ಪಡೆದು ಇದೀಗ 200 ಗಿಡಗಳನ್ನು ನೆಟ್ಟಿದ್ದೇನೆ. ಮಾರುಕಟ್ಟೆಯಲ್ಲಿ ಕೆಂಪು ಪೇರಲಕ್ಕೆ ಬೇಡಿಕೆಯಿದೆ. ಉತ್ತಮ ಬೆಲೆಗೆ ಮಾರಾಟ ಮಾಡಿದ್ದರಿಂದ ಲಾಭವೂ ಆಯಿತು. ಇದಾದ ಬಳಿಕ 150 ದೇಶಿ ಪಪ್ಪಾಯಿ ಗಿಡಗಳನ್ನು ಬೆಳೆಸಿದ್ದೇನೆ. ತೈವಾನ್ ಪಪ್ಪಾಯಿ ಗಿಡಗಳೂ ಜಮೀನಿನಲ್ಲಿವೆ. ಅವುಗಳಿಗೂ ಸಾಕಷ್ಟು ಬೇಡಿಕೆ ಇದೆ ಎನ್ನುತ್ತಾರೆ ತೊಲರಾಮ್.
ವಿದ್ಯುತ್ಗಾಗಿ ಸೋಲಾರ್ ಅಳವಡಿಕೆ: ಇನ್ನು ಬೆಳೆ ಬೆಳೆಯಲು ವಿದ್ಯುತ್ ಕೊರತೆ ಉಂಟಾಗಿತ್ತು. ಇದನ್ನು ನೀಗಿಸಲು ಸೋಲಾರ್ ಪ್ಲಾಂಟ್ ಅಳವಡಿಸುವ ಉಪಾಯ ಮಾಡಿದರು. ಕೃಷಿ ಇಲಾಖೆಯಿಂದ ಸಹಾಯಧನ ಪಡೆದು ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಿದೆ. ಇದರಿಂದ ಜಮೀನಿಗೆ ಸಾಕಾಗುವಷ್ಟು ವಿದ್ಯುತ್ ನೈಸರ್ಗಿಕವಾಗಿಯೇ ಸಿಗಲಿದೆ. ಇದೂ ಕೂಡ ಕೃಷಿಯಲ್ಲಿ ಲಾಭ ತಂದಿದೆ ಎಂಬುದು ರೈತನ ಸ್ಪಷ್ಟನೆ.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮ: ಡಿವೈಸ್ ಬಳಕೆಗೆ ಎಕ್ಸ್‌ಪರ್ಟ್ ಟೀಂ ನಿಯೋಜಿಸುತ್ತಿದ್ದ ಕಿಂಗ್ಪಿನ್