ನವದೆಹಲಿ: ಹೊಸ ಕೃಷಿ ಕಾನೂನಿನ ಬಗ್ಗೆ ಪಂಜಾಬ್ನ ರೈತರು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ ಹಿನ್ನೆಲೆ ಎರಡನೇ ಸುತ್ತಿನ ಮಾತುಕತೆ ನಡೆಸಲು ಡಿ.3ರಂದು ರೈತ ಸಂಘಟನೆಗಳನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.
ಸರ್ಕಾರ ಮತ್ತೆ ಸಭೆ ಕರೆಯುವುದಾಗಿ ರೈತ ಮುಖಂಡರಿಗೆ ಭರವಸೆ ನೀಡಿದ ಬಳಿಕವಷ್ಟೇ, ರೈತರು ಷರತ್ತು ಹಾಕಿ ರೈಲ್ವೆ ರೋಕೊ ಚಳವಳಿಯನ್ನು ನಿಲ್ಲಿಸಿದ್ದಾರೆ. ಈ ಚಳವಳಿಯನ್ನು ಪಂಜಾಬ್ನ ರೈತರು ಸುಮಾರು ಎರಡು ತಿಂಗಳಿನಿಂದ ನಡೆಸುತ್ತಿದ್ದರು. ಸೋಮವಾರ ಇದನ್ನು ನಿಲ್ಲಿಸಿ, ಕೇವಲ ಸರಕು ರೈಲುಗಳು ಮಾತ್ರ ಚಲಿಸಲು ಅನುಮತಿ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ : ಒಲ್ಲದ ಮನಸ್ಸಿನಿಂದ ಸೋಲೊಪ್ಪಿಕೊಂಡ ಟ್ರಂಪ್: ಬೈಡನ್ಗೆ ಅಧಿಕಾರ ಹಸ್ತಾಂತರಕ್ಕೆ ಗ್ರೀನ್ ಸಿಗ್ನಲ್!
"ಡಿಸೆಂಬರ್ 3 ರಂದು ಬೆಳಗ್ಗೆ 11 ಗಂಟೆಗೆ ವಿಜ್ಞಾನ ಭವನದಲ್ಲಿ ಎರಡನೇ ಸುತ್ತಿನ ಚರ್ಚೆಗೆ ನಾವು 30ಕ್ಕೂ ಹೆಚ್ಚು ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಕರೆದಿದ್ದೇವೆ" ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪರವಾಗಿ ರೈತ ಸಂಸ್ಥೆಗಳಿಗೆ ಕಾರ್ಯದರ್ಶಿ ಆಹ್ವಾನ ಕಳುಹಿಸಿದ್ದಾರೆ. ಸಭೆಯಲ್ಲಿ ಆಹಾರ ಸಚಿವ ಪಿಯೂಷ್ ಗೋಯಲ್ ಕೂಡ ಹಾಜರಾಗುವ ನಿರೀಕ್ಷೆಯಿದೆ. ಮಾತುಕತೆಗೆ ಪಂಜಾಬ್ ಸರ್ಕಾರದ ಆಹಾರ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಮೊದಲ ಸುತ್ತಿನ ಮಾತುಕತೆ ನವೆಂಬರ್ 13 ರಂದು ನಡೆದಿತ್ತು. ಪಂಜಾಬ್ ರೈತರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.