ಬಿಹಾರ : ಸಿಪಿಐ ಮುಖಂಡ ಮತ್ತು ಜೆಎನ್‌ಯು ಮಾಜಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ. ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಜಾರಿಗೆ ತಂದಿದೆ. ದೇಶದ ಉನ್ನತ ಉದ್ಯಮಿಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರಧಾನಿ ಕಾನೂನುಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರೇ ಧ್ವನಿ ಎತ್ತಿದ್ದಾರೆ. ಆದರೆ, ಪ್ರಧಾನಿ, ಹಲವಾರು ಸಂದರ್ಭಗಳಲ್ಲಿ ಈ ಕಾನೂನುಗಳು ರೈತರ ಪರವಾಗಿವೆ ಎಂದು ಪ್ರತಿಪಾದಿಸುತ್ತಿದ್ದಾರೆ. ಹೊಸದಾಗಿ ರೂಪುಗೊಂಡ ಕಾನೂನುಗಳು ರೈತರ ಪರವಾಗಿವೆ ಎಂದು ಪ್ರಧಾನಿ ಮೋದಿ ಸಂತಸಪಡುತ್ತಿದ್ದಾರೆ. ಮತ್ತೊಂದೆಡೆ, ಅಧ್ಯಕ್ಷ ರಾಮನಾಥ್ ಕೋವಿಂದ್ ಅವರ ಅನುಮೋದನೆ ದೊರೆತ ದಿನದಿಂದಲೂ ರೈತರು ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ. ರೈತರಿಗೇ ಈ ಕಾನೂನುಗಳು ಬೇಡ ಎಂದರೆ ನಮ್ಮ ಪ್ರಧಾನಿ ಯಾರಿಗಾಗಿ ಈ ಕಾನೂನುಗಳನ್ನು ಅಂಗೀಕರಿಸಿದರು ಎಂದು ಪ್ರಶ್ನಿಸಿದರು.
"ಮೈ ದೇಶ್ ನಹಿ ಬಿಕ್ನೆ ದೂಂಗಾ" ಎಂದು ಮೋದಿ ಹೇಳುತ್ತಾರೆ. ಆದರೆ, ತಮ್ಮ ಆತ್ಮೀಯ ಗೆಳೆಯ ಅಂಬಾನಿ ಮತ್ತು ಅದಾನಿಗೆ ರಾಷ್ಟ್ರವನ್ನು ಮಾರಾಟ ಮಾಡುವ ಉದ್ದೇಶದಿಂದ ಹೀಗೆ ಹೇಳುತ್ತಿದ್ದಾರೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ ಎಂದು ಕನ್ಹಯ್ಯ ಕುಮಾರ ವ್ಯಂಗ್ಯವಾಡಿದರು.